ಮರಳಿ ಬಂದ ಮಣಿ

* ಚಿಕ್ಕನೆಟಕುಂಟೆ ಜಿ.ರಮೇಶ್
ಮದುವೆಯಾದ ಬಳಿಕ ನಟಿ ಪ್ರಿಯಾಮಣಿ ಮರಳಿ ಬಂದಿದ್ದಾರೆ. ಮದುವೆಯಾದ ನಂತರ ಚಿತ್ರದಲ್ಲಿ ನಟಿಸುತ್ತಾರೋ ಇಲ್ಲವೋ ಎನ್ನುವ ಎಲ್ಲಾ ಅನುಮಾನ ಮತ್ತು ಗೊಂದಲಗಳಿಗೆ ಈ ಮೂಲಕ ತೆರೆ ಎಳೆದಿದ್ದಾರೆ.

ತಮಿಳಿನ ’ಕುಡಿ’ ಚಿತ್ರದ ರಿಮೇಕ್ “ಧ್ವಜ” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಬಳಿಕ ಪ್ರಿಯಾಮಣಿ ಅವರ ಮೊದಲ ನಟನೆಯ ಚಿತ್ರ. ಹಿರಿಯ ನಿರ್ದೇಶಕ ಮತ್ತು ಛಾಯಾಗ್ರಾಹಕ ಅಶೋಕ್ ಕಶ್ಯಪ್ ರಾಜಕೀಯ ಥ್ರಿಲ್ಲರ್ ಚಿತ್ರದ ಮೂಲಕ ಆಕ್ಷನ್ ಕಟ್‌ಗೆ ಮರಳಿದ್ದಾರೆ. ಮೈಸೂರಿನ ಹುಡುಗ ರವಿಗೌಡ ಚಿತ್ರಕ್ಕೆ ಬಂಡವಾಳ ಹಾಕಿದ್ದು ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಚಿತ್ರದ ಬಗ್ಗೆ ಹೇಳಿಕೊಳ್ಳಲು ಕಳೆದವಾರ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.ಅಲ್ಲಿ ಮೊದಲು ಮಾತಿಗಿಳಿದ ನಿರ್ದೇಶಕ ಅಶೋಕ್ ಕಶ್ಯಪ್, ರಿಮೇಕ್ ಚಿತ್ರವಾದರೂ ಇಲ್ಲಿಯ ಸೊಗಡಿಗೆ ತಕ್ಕಂತೆ ಚಿತ್ರವನ್ನು ನಿರ್ದೇಶನ ಮಾಡಲಾಗಿದೆ. ಸದ್ಯದಲ್ಲಿಯೇ ರಾಜ್ಯ ವಿಧಾನಸಭೆಗೆ ಚುನಾವಣೆ ಎದುರಾಗಲಿದೆ. ಕಾಕತಾಳೀಯ ಎಂದರೆ ಚಿತ್ರದಲ್ಲಿ ಚುನಾವಣೆ, ರಾಜಕೀಯ ದ್ವೇಷ, ಪಕ್ಷ ರಾಜಕೀಯವಿದೆ. ಚುನಾವಣೆಗೂ ಮುನ್ನ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವೊಂದಲಾಗಿದೆ. ಚಿತ್ರದಲ್ಲಿ ಐದು ಹಾಡುಗಳಿವೆ, ಚಿತ್ರವನ್ನು ಮೈಸೂರು, ಬೆಂಗಳೂರು, ಪಾಂಡವಪುರ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ಉತ್ತಮ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕ ಕಮ್ ನಿರ್ಮಾಪಕ ರವಿ, ಚಿತ್ರದಲ್ಲಿ ರಾಜಕಾರಣಿ ಮತ್ತು ಪ್ರೊಫೆಸರ್ ಸೇರಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಂದು ಅಣ್ಣನ ಪಾತ್ರ ಮತ್ತು ಮತ್ತೊಂದು ತಮ್ಮನ ಪಾತ್ರ. ಎರಡೂ ಪಾತ್ರಗಳನ್ನು ಮಾಡುವುದು ಸವಾಲಾಗಿತ್ತು. ರಿಮೇಕ್ ಚಿತ್ರ. ಇಲ್ಲಿಯ ನೇಟೀವಿಟಿಗೆ ತಕ್ಕಂತೆ ಸಿನಿಮಾ ಮಾಡಲಾಗಿದೆ.

ಚಿತ್ರಕ್ಕೆ ಸರಿ ಸುಮಾರು ನಾಲ್ಕು ಕೋಟಿರೂಪಾಯಿ ಖರ್ಚು ಮಾಡಲಾಗಿದೆ.ಈ ತಿಂಗಳಾಂತ್ಯ ಇಲ್ಲವೇ ಮುಂದಿನ ತಿಂಗಳ ಮೊದಲವಾರ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ.ಚಿತ್ರ ತಂಡಕ್ಕೆ ಎಲ್ಲರ ಸಹಕಾರ ಬೆಂಬಲಬೇಕು ಹರಸಿ ಹಾರೈಸಿ ಎಂದು ಕೇಳಿಕೊಂಡರು. ನಟಿ ಪ್ರಿಯಾಮಣಿ,ತಮಿಳಿನಲ್ಲಿ ಧನುಷ್ ನಟಿಸಿದ್ದರು. ಇಲ್ಲಿ ರವಿ ಉತ್ತಮವಾಗಿ ನಟಿಸಿದ್ದಾರೆ.ಚಿತ್ರದಲ್ಲಿ ಪಾತ್ರದ ಹೆಸರು ರಮ್ಯಾ. ಹಾಗಂತ ಚಿತ್ರನಟಿ ರಮ್ಯಾಗೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹೆಸರು ಕಾಕತಾಳೀಯ ಅಷ್ಟೇ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ಅವರದು.

ಎರಡನೇ ನಾಯಕಿ ದಿವ್ಯ ಉರುಡುಗ, ಹುಲಿರಾಯ ಚಿತ್ರದ ಬಳಿಕ ಧ್ವಜ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳು ಬರಲಿವೆ.ಚಿತ್ರದಲ್ಲಿ ಕಾಮಿಡಿ ಟಚ್ ಇದೆ. ಅದು ಎಲ್ಲಿಗೂ ಇಷ್ಟವಾಗಲಿದೆ ಎಂದು ಹೇಳಿಕೊಂಡರು.

ಚಿತ್ರದಲ್ಲಿ ಹಿರಿಯ ನಿರ್ದೇಶಕ ಟಿ.ಎನ್ ಸೀತಾರಾಮ್ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಲ್ಲದೆ ಅಶ್ವಿನಿ ರಾಮ್‌ಪ್ರಸಾದ್ ಮತ್ತಿತರ ತಾರಾ ಬಳಗ ಚಿತ್ರದಲ್ಲಿದೆ. ಚಿತ್ರಕ್ಕೆ ಕವಿರಾಜ್,ಕೆ.ಕಲ್ಯಾಣ್, ಮಂಜು ಮಾಂಡವ್ಯ ಹಾಡು ಬರೆದಿದ್ದಾರೆ. ಮಾಂಡವ್ಯ ಸಂಭಾಷಣೆಯನ್ನೂ ಬರೆದಿದ್ದಾರೆ.

Leave a Comment