ಮಮತಾ ಬ್ಯಾನರ್ಜಿ ತಲೆ ಒಡೆದಿದ್ದ ಆರೋಪಿ 29 ವರ್ಷದ ಬಳಿಕ ಖುಲಾಸೆ

ಕೋಲ್ಕತಾ,ಸೆ.12: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆದ ಕೊಲೆ ಪ್ರಯತ್ನದ ಆರೋಪದ ಪ್ರಮುಖ ಆರೋಪಿ ಲಾಲು ಅಲಂ ಎಂಬಾತನನ್ನು 29 ವರ್ಷದ ಬಳಿಕ ಗುರುವಾರ ಖುಲಾಸೆ ಮಾಡಲಾಗಿದೆ.

‘ಆರೋಪಪಟ್ಟಿಯಲ್ಲಿ ಹೆಸರು ನಮೂದಿಸಲಾಗಿರುವ ಆರೋಪಿಗಳಲ್ಲಿ ಕೆಲವು ಮೃತಪಟ್ಟಿದ್ದಾರೆ. ಇನ್ನು ಕೆಲವು ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೇನೂ ಉಳಿದಿಲ್ಲ. ಇದು ಹಣ ಮತ್ತು ಸಮಯದ ವ್ಯರ್ಥ ವ್ಯಯವಲ್ಲದೆ ಇದರಿಂದ ಬೇರೇನೂ ಸಾಧಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತೀರ್ಮಾನಿಸಿದೆ’ ಎಂದು ಸರ್ಕಾರದ ಪರ ವಕೀಲರಾದ ರಾಧಾಕಾಂತಾ ಮುಖರ್ಜಿ ತಿಳಿಸಿದರು. ಈ ಪ್ರಕರಣವನ್ನು ಹಿಂದೆ ಆಡಳಿತ ನಡೆಸಿದ್ದ ಎಡಪಕ್ಷಗಳ ಸರ್ಕಾರ ತಡೆಹಿಡಿದಿತ್ತು ಎಂದೂ ಅವರು ಆರೋಪಿಸಿದರು.

ನನಗೆ ತುಂಬಾ ಖುಷಿಯಾಗುತ್ತಿದೆ. ನನ್ನ ಸಂತಸವನ್ನು ಹೇಳಲು ಆಗುತ್ತಿಲ್ಲ. ಆ ವ್ಯಕ್ತಿ ಈಗ ಮುಖ್ಯಮಂತ್ರಿಯಾಗಿದ್ದಾರೆ ಎನ್ನುವುದು ನನಗೆ ಭಯ ಉಂಟುಮಾಡಿದ್ದಂತೂ ನಿಜ. ಆದರೆ 2011ರಲ್ಲಿಯೇ ಸರ್ಕಾರ (ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದಾಗ) ಈ ನಿರ್ಧಾರ ತೆಗೆದುಕೊಂಡಿದ್ದರೆ ನಾನು ನನ್ನ ಕೆಲಸದ ಮೇಲೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತಿತ್ತು’ ಎಂದು ಆರೋಪದಿಂದ ಖುಲಾಸೆಯಾದ ಸಂಭ್ರಮವನ್ನು ಲಾಲು ಅಲಂ (62) ಹಂಚಿಕೊಂಡಿದ್ದಾರೆ.

ಅಲಂ ಅವರ ವಿರುದ್ಧ ಯಾವುದೇ ಸಾಕ್ಷ್ಯ ಲಭ್ಯವಾಗದ ಕಾರಣ ಮತ್ತು ಅವರ ವಿರುದ್ಧ ಸಾಕ್ಷಿದಾರರು ಹೇಳಿಕೆ ನೀಡಲು ಮುಂದೆ ಬರುವ ಯಾವುದೇ ಸಾಧ್ಯತೆಗಳು ಇಲ್ಲದ ಕಾರಣ ಅವರನ್ನು ಅಲಿಪೋರ್ ನ್ಯಾಯಾಲಯ ಖುಲಾಸೆಗೊಳಿಸಿತು ಎಂದು ವಕೀಲರು ತಿಳಿಸಿದರು.

ಆರೋಪಿಯಿಂದ ಹಲ್ಲೆಗೆ ಒಳಗಾಗಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಕ್ಷಿಯಾಗಿ ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದಾರೆ ಎಂದು ಸರ್ಕಾರಿ ವಕೀಲರು ಹೇಳಿದ್ದರು. ಆದರೆ ಅದಕ್ಕೆ ವ್ಯವಸ್ಥೆ ಮಾಡಲು ಸಾಧ್ಯವಾಗಿರಲಿಲ್ಲ.

ದಕ್ಷಿಣ ಕೋಲ್ಕತಾದ ಪಾರ್ಕ್ ಸರ್ಕಸ್ ಪ್ರದೇಶದಲ್ಲಿ ವಾಸಿಸುತ್ತಿರುವ ಅಲಂ, ಸಣ್ಣ ವ್ಯಾಪಾರ ನಡೆಸುತ್ತಿದ್ದಾರೆ. ಅವರು ಆಗ ಆಡಳಿತ ನಡೆಸುತ್ತಿದ್ದ ಸಿಪಿಎಂನ ಯುವ ಘಟಕದ ಮುಖಂಡರಾಗಿದ್ದರು.

1990ರ ಆಗಸ್ಟ್ 16ರಂದು ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸದ ಸಮೀಪದ ಹಜ್ರಾ ಕ್ರಾಸಿಂಗ್ ಬಳಿ ಅವರ ಮೇಲೆ ನಡೆದ ದಾಳಿ ಮನೆಮನೆಯ ಚರ್ಚೆಯ ಸಂಗತಿಯಾಗಿತ್ತು. ಪ್ರಮುಖ ಆರೋಪಿ ಅಲಂ ಅವರು ಮಮತಾ ಬ್ಯಾನರ್ಜಿ ಅವರ ತಲೆಗೆ ಬಡಿಗೆಯಿಂದ ಹಲ್ಲೆ ನಡೆಸಿದ್ದ. ಇದರಿಂದ ಅವರ ತಲೆಬರುಡೆ ಮುರಿದುಹೋಗಿತ್ತು.

ಆಗ 35 ವರ್ಷದವರಾಗಿದ್ದ ಮಮತಾ ಬ್ಯಾನರ್ಜಿ ಅವರನ್ನು ಕೆಲವು ವಾರ ಕಾಲ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. 1994ರಲ್ಲಿ ಮಮತಾ ಅವರು ಈ ಪ್ರಕರಣದ ಸಾಕ್ಷಿದಾರರಾಗಿ ಅಲಿಪೋರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

2011ರ ಜೂನ್‌ನಲ್ಲಿ ಟೆಲಿವಿಷನ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಮತಾ ಅವರು, ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದನ್ನು ತಾಯಿಗೆ ಹೇಳದೆ ಹಾಗೆ ಮನೆಯಿಂದ ಹೋದದ್ದು ಅದೇ ಮೊದಲ ದಿನವಾಗಿತ್ತು ಎಂದು ತಮ್ಮ ಮೇಲಿನ ಕೊಲೆ ಪ್ರಯತ್ನದ ದಿನವನ್ನು ನೆನಪಿಸಿಕೊಂಡಿದ್ದರು.

2011ರಲ್ಲಿ 34 ವರ್ಷದ ಸಿಪಿಎಂ ಆಡಳಿತವನ್ನು ಅಂತ್ಯಗೊಳಿಸಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದಿದ್ದರು. ಆಗ ಜಾಮೀನಿನ ಮೇಲೆ ಹೊರಗಿದ್ದ ಅಲಂ ತಮ್ಮ ಕೃತ್ಯಕ್ಕೆ ಕ್ಷಮೆ ಕೋರಿದ್ದರು.

Leave a Comment