ಮನ ಮಂಥನ

ಮಾನಸಿಕ ತೊಂದರೆಗಳಿಗೆ, ಸಮಸ್ಯೆಗಳಿಗೆ ಪರಿಹಾರವಿದೆ. ಹೀಗಿದ್ದೂ ಇದರಿಂದಾಗಿ ಅನೇಕರು ಸಾವು ಮತ್ತು ಮಾನಸಿಕ ಸಮಸ್ಯೆಗಳಿಗೆ ಬಲಿ ಆಗುತ್ತಿದ್ದಾರೆ”. ಇದು ಸುಮಾರು ಹದಿನೈದು ವರ್ಷದ ನಂತರ ‘ಮನ ಮಂಥನ’ ಚಿತ್ರದ ಮೂಲಕ ಮಾತನಾಡುತ್ತಿರುವ ಸುರೇಶ್ ಹೆಬ್ಳಿಕರ್ ಅವರ ನಿಜವಾದ ಸಾಮಾಜಿಕ ಕಳಕಳಿಯ ನುಡಿಗಳಾಗಿತ್ತು.

ಇಂದು ಬಿಡುಗಡೆಯಾಗಿರುವ ಚಿತ್ರದ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರ ಈ ಮಾತು ‘ಮನ ಮಂಥನ’ವು ಸಮಾಜದಲ್ಲಿನ ಪ್ರಸ್ತುತ ಮಾನಸಿಕ ಸಮಸ್ಯೆಗಳನ್ನು ಬಿಡಿಸಿಡುವ ಜೊತೆಯಲ್ಲಿ ಪರಿಹಾರ ಸೂಚಿಸುವ ಚಿತ್ರವಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿತು. ಇದರ ಕಥಾವಸ್ತುವು ಶಿವಮೊಗ್ಗದ ಕುಟುಂಬದಲ್ಲಿ ನಡೆದಿರುವ ನೈಜ ಘಟನೆಯನ್ನು ಆಧರಿಸಿದೆ.

ಇದಕ್ಕೆ ಕಥೆ ಮಾಡಿ ನಿರ್ಮಿಸಿರುವ ಸುಪ್ರಸಿದ್ಧ ಮಾನಸಿಕ ತಜ್ಞ ದಿ. ಡಾ. ಅಶೋಕ್ ಪೈ ಅವರು ನಿಧನರಾಗಿ ಸುಮಾರು ಎರಡು ತಿಂಗಳು ಕಳೆದಿವೆ. ಇದು ಅವರ ಮಹತ್ವಾಕಾಂಕ್ಷೆಯ ಚಿತ್ರವಾಗಿತ್ತು ಎಂದ ಹೆಬ್ಳಿಕರ್ ಹೇಳಿದಾಗ ಅಪಾರ ದುಃಖ ಅವರಲ್ಲಿತ್ತು.

ನಾಯಕರಾಗಿರುವ ಕಿರಣ್ ಚಿತ್ರಕ್ಕೆ ಆಯ್ಕೆಯಾದಾಗ ಈ ತರಹದ ಚಿತ್ರವೆಂದು ಗೊತ್ತಿರಲಿಲ್ಲ ಎಂದ ಅವರಲ್ಲಿ ಇದು ತಮ್ಮ ಮೊದಲ ಚಿತ್ರವಾಗಿರುವುದಕ್ಕೆ ಖುಷಿ ಇತ್ತು. ನಾಯಕಿಯಾಗಿರುವ ಅರ್ಪಿತಾಗೌಡ ಶಿವಮೊಗ್ಗದವರು ಈಗಾಗಲೇ ‘ನಾಗರು ಹಾವು’ ಚಿತ್ರದಲ್ಲಿ ರಮ್ಯ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಅದರಲ್ಲಿ ನಾಗದೇವತೆಯಾಗಿ ಕಾಣಿಸಿಕೊಂಡಿದ್ದು, ಇದು ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ತೆರೆಕಾಣುತ್ತಿರುವ ಅವರ ಮೊದಲ ಚಿತ್ರ. ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನಟ ರಮೇಶ್ ಭಟ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ (೨೦೧೫-೧೬) ಸಿಕ್ಕಿದೆ.

ಅವರು, ಅಶೋಕ್ ಪೈ ‘ಮನಮಂಥನ’ವನ್ನು ಹಣಕ್ಕಾಗಲಿ, ಕೀರ್ತಿಗಾಗಿ ಮಾಡಿದ್ದಲ್ಲ ಸಮಾಜದ ಹಿತಕ್ಕಾಗಿ ಮಾಡಿರುವ ಚಿತ್ರ ಇದೊಂದು ಗುಣಮಟ್ಟದ ಚಿತ್ರವೆಂದು ಎದೆತಟ್ಟಿ ಹೇಳಬಹುದು ಎಂದು ಭಾವುಕರಾದರು.

ಪಿ. ರಾಜನ್ ಛಾಯಾಗ್ರಹಣ, ಪ್ರವೀಣ್ ಡಿ.ರಾವ್ ಸಂಗೀತ, ಎಂ.ಎನ್. ಸ್ವಾಮಿ ಸಂಕಲನವಿದ್ದು, ತಾರಾಗಣದಲ್ಲಿ ಸುರೇಶ್ ಹೆಬ್ಳಿಕರ್, ರಮೇಶ್ ಭಟ್, ಕಿರಣ್ ರಜಪೂತ್, ಅರ್ಪಿತಾ, ಸಂಗೀತ, ಸುಮನ್, ಶ್ರೀಧರ್, ಲಕ್ಷ್ಮೀ ಗೋಪಿನಾಥ್ ಮುಂತಾದವರಿದ್ದಾರೆ.

Leave a Comment