ಮನೋಹರ ಯೋಗ ಭಂಗಿಗಳ ನೃತ್ಯನೈಪುಣ್ಯ

ಬೆಂಗಳೂರಿನಲ್ಲಿ ಪ್ರತಿನಿತ್ಯ ಒಂದಲ್ಲ ಒಂದುಕಡೆ ನೃತ್ಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಕಲಾಪ್ರಿಯರಾದ ರಸಿಕರು ನೃತ್ಯ-ಸಂಗೀತ -ನಾಟಕಾದಿಗಳ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿದೋರುತ್ತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಬಂದಿರುವುದು ಧನಾತ್ಮಕ ಅಂಶ. ಇಂಥ ಒಂದು ಮನೋಹರ ಸಂಜೆಯನ್ನು ನಿರ್ಮಿಸಿದ ರಾಹುಲ್ ಶಿವಶಂಕರಾಚಾರಿ ಅವರ ರಂಗಪ್ರವೇಶ ಕಾರ್ಯಕ್ರಮ ಇತ್ತೀಚಿಗೆ ಸೇವಾಸದನದಲ್ಲಿ ಯಶಸ್ವಿಯಾಗಿ ನೆರವೇರಿತು.

ಹೆಬ್ಬಾಳದ ‘ನಾಟ್ಯ ಕಲಾಕ್ಷೇತ್ರ’ ನೃತ್ಯಸಂಸ್ಥೆಯ ಖ್ಯಾತ ನೃತ್ಯಗುರು ಪ್ರಶಾಂತ್ ಗೋಪಾಲ್ ಶಾಸ್ರೀ ಅವರ ಸಮರ್ಥ ಗರಡಿಯಲ್ಲಿ ರೂಪುಗೊಂಡ ಕಲಾವಿದ ಈ ರಾಹುಲ್, ಗುರುಗಳು ಕಲಿಸಿಕೊಟ್ಟಿದ್ದನ್ನು ನಿಷ್ಠೆಯಿಂದ ಅಷ್ಟೇ ಅಚ್ಚುಕಟ್ಟಾಗಿ ‘ಮಾರ್ಗಂ’ ಪದ್ದತಿಯ ಸಾಂಪ್ರದಾಯಕ ಕೃತಿಗಳನ್ನು ತಮ್ಮ ಮನೋಹರ ನರ್ತನದ ಮೂಲಕ ಪ್ರಸ್ತುತಪಡಿಸಿ ಮೆಚ್ಚುಗೆ ಗಳಿಸಿದರು. ಪ್ರಮುಖವಾಗಿ ಕಲಾವಿದನ ಚಮತ್ಕಾರಿಕ ಯೋಗದ ಭಂಗಿಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಎತ್ತರದ ನಿಲುವಿಗೆ ಶೋಭಿಸುವಂತೆ ಹಗುರವಾಗಿ ಮೇಲಕ್ಕೆ ಜಿಗಿದು ಸುಂದರ ಆಕಾಶಚಾರಿಗಳನ್ನು ನಿರೂಪಿಸುವ ರಾಹುಲ್ ಗೆ ಮಂಡಿ ಅಡವು, ಭ್ರಮರಿಗಳು, ಮಿಂಚಿನ ಸಂಚಾರದ ಬಗೆಬಗೆಯ ನೃತ್ತ ವಿನ್ಯಾಸಗಳು ಲೀಲಾಜಾಲ.

ಹಿರಿಯ ಗುರು ದಂಡಾಯುಧಪಾಣಿ ಪಿಳ್ಳೈ ಅವರಿಂದ ಸಾಗಿ ಬಂದ ನೃತ್ಯ ಸಂಯೋಜನೆ ಐದನೆಯ ತಲೆಮಾರಿನ ರಾಹುಲ್ ವರೆಗೆ ಗುರು ಪರಂಪರೆಯಿಂದ ಒದಗಿ ಬಂದ ನಾಟರಾಗದ ‘ಪುಷ್ಪಾಂಜಲಿ’ವಿಶಿಷ್ಟ ನೃತ್ಯಬಂಧವಾಗಿ ಅಭಿವ್ಯಕ್ತವಾಯಿತು. ಮನೋಹರ ನೃತ್ಯ ಗಣಪತಿ ಕುರಿತ ಶ್ಲೋಕದಿಂದ ಪ್ರಸ್ತುತಿ ಶುಭಾರಂಭವಾಯಿತು. ‘ಅಲ್ಲರಿಪು’ ವಿನಲ್ಲಿ ಅಂಗಶುದ್ಧಿಯ ಸುಲಲಿತ ನರ್ತನ ಅಚ್ಚುಕಟ್ಟಾಗಿ ಮೂಡಿಬಂತು. ಗುರು ಪ್ರಶಾಂತರ ಸ್ಫುಟವಾದ ನಟುವಾಂಗ ಶಿಷ್ಯನಿಗೆ ಸ್ಫೂರ್ತಿ ಚೇತನವಾಗಿತ್ತು ಸರಸ್ವತಿಯ ಸ್ತುತಿ ದೇವಿಯ ಮಹಿಮಾತಿಶಯವನ್ನು, ಭಾವ-ಭಂಗಿಗಳನ್ನು ಅನಾವರಣಗೊಳಿಸಿತು. . ಸಾಹಿತ್ಯವಿಲ್ಲದಿದ್ದರೂ ‘ಜತಿಸ್ವರ’ (ದೇವ ಮನೋಹರಿ ರಾಗ) ಸ್ವರಗಳ ಮಾಧುರ್ಯದಲ್ಲಿ ಕಣ್ತುಂಬಿತು. ವೈವಿಧ್ಯಪೂರ್ಣ ನೃತ್ತಗಳ ಸಂಭ್ರಮದಿಂದ ಕಲಾವಿದ ನೃತ್ತಾರ್ಚನೆಯನ್ನು ಬಹು ಶ್ರದ್ಧೆಯಿಂದ ನಿರೂಪಿಸಿದ

ಪ್ರಸ್ತುತಿಯ ಪ್ರಧಾನ ಘಟ್ಟ ‘ವರ್ಣ’ ಕಲಾವಿದರ ನೃತ್ಯ ಸಾಮರ್ಥ್ಯ ಮತ್ತು ಅಭಿನಯಗಳಿಗೆ ಸವಾಲು ನೀಡುವ ಕ್ಲಿಷ್ಟವಾದ ದೀರ್ಘ ಬಂಧ. ಅಗಾಧ ನೆನಪಿನ ಶಕ್ತಿ, ದೇಹ ಚೈತನ್ಯವೂ ಅತ್ಯಗತ್ಯ. ರಾಹುಲ್ ಪ್ರಸ್ತುತ ಪಡಿಸಿದ ‘ಪದವರ್ಣ’ –ರಾಗಮಾಲಿಕೆಯ ‘ಫಾಲನೇತ್ರ ಕೈಲಾಸವಾಸ ಪ್ರಭೋ’ ಎಂದು ನಟರಾಜನನ್ನು ಗುಣಗಾನ ಮಾಡುವ ಭಕ್ತಿಪೂರ್ಣ ಕೃತಿ. ನೃತ್ಯಾಧಿದೇವ ಶಿವನ ಆಭರಣ-ಅಲಂಕರಣಗಳನ್ನು ವರ್ಣಿಸಿ, ಆತನ ವಿಶಿಷ್ಟ ಆನಂದ ತಾಂಡವದ ವೈಶಿಷ್ಟ್ಯವನ್ನು ರಾಹುಲ್ ತನ್ನ ರಮಣೀಯ ಆಂಗಿಕಾಭಿನಯಗಳಿಂದ ಅಭಿವ್ಯಕ್ತಿಸಿದ. ಈ ಭಾಗದಲ್ಲಿ ಆಟ ಪ್ರದರ್ಶಿಸಿದ ಅನೇಕ ಯೋಗಭಂಗಿಗಳು ಆಕರ್ಷಕವಾಗಿದ್ದವು. ಎರಡೂ ಕಾಲನ್ನು ಆಚೀಚೆ ನಿಡಿದಾಗಿ ಚಾಚಿಕೊಂಡು ನೆಲದ ಮೇಲೆ ಸಲೀಸಾಗಿ ಕುಳಿತ ಭಂಗಿ ರೋಮಾಂಚಕ. ಹಾಗೇ ಅನಾಮತ್ತಾಗಿ ತನ್ನ ಒಂದು ಕಾಲನ್ನು ಆಕಾಶದತ್ತ ಎತ್ತಿ ಬೆರಗುಗೊಳಿಸಿದ. ಶಿವಾನ ರೌದ್ರತೆಯನ್ನು ಸೂಸುವ ಬಿರುಸಿನ ಹರಿತವಾದ ನೃತ್ತಗಳು ಮತ್ತು ಕರಾರುವಾಕ್ಕಾದ ಮುಕ್ತಾಯಗಳು ಗಮನ ಸೆಳೆದವು. ಸಂಚಾರಿಯ ಕಥಾನಕದಲ್ಲಿ ಶಿವ, ಲೋಕಕಲ್ಯಾಣಾರ್ಥವಾಗಿ ನೀಲಕಂಠನಾದ ಘಟನೆ ಮತ್ತು ಮನ್ಮಥ ದಹನ ಪ್ರಕರಣಗಳನ್ನು ಪ್ರಸ್ತುತಿಗೊಳಿಸಿದ.

ಮುಂದೆ ಕೂಡ ಶಿವನ ಕುರಿತ ನರ್ತನ ಮುಂದುವರಿಯಿತು. ಸ್ವಾತಿ ತಿರುನಾಳರು ರಚಿಸಿದ ಹಂಸನಂದಿ ರಾಗದ ‘ಶಂಕರ ಶ್ರೀಗಿರಿ ನಾಥ ಪ್ರಭೋ’- ದೃಶ್ಯವತ್ತಾಗಿ ಪ್ರಸ್ತುತವಾಯಿತು. ಖಚಿತ ಹಸ್ತಮುದ್ರೆ, ಅಡವುಗಳ ಸೌಂದರ್ಯ ಶಂಕರನ ವಿವಿಧ ಭಂಗಿಗಳ ಚೆಲುವಿನೊಡನೆ ಮಿಳಿತವಾಯಿತು. ಮಂಡಿ ಅಡವುಗಳ ರಂಗಾಕ್ರಮಣ ಸೊಗಯಿಸಿತು. ಕಡೆಯ ಭಂಗಿ ಮನೋಜ್ಞ. ಮುಂದೆ ಮೈಸೂರು ವಾಸುದೇವಾಚಾರ್ಯರ ಕಮಾಚ್ ರಾಗದ ‘ಬ್ರೋಚೆವಾ’ ಕೃತಿಯನ್ನು ರಾಹುಲ್ ಭಕ್ತಿಭಾವದಿಂದ ಸಾದರಪಡಿಸಿದ. ನಿನ್ನೆಲ್ಲ ಭಕ್ತರನ್ನೂ ಕರುಣೆಯಿಂದ ಕಾಪಾಡುವ ನೀನ್ಯಾಕೆ ನನ್ನ ಮೇಲೆ ಕೃಪೆಗೈಯುತ್ತಿಲ್ಲ ಎಂದು ವಿನಮ್ರ, ಕರುಣಾರ್ದ್ರತೆಯಿಂದ ಬೇಡುವಲ್ಲಿ ತಾದಾತ್ಮ್ಯತೆ ಅಭಿವ್ಯಕ್ತವಾಯಿತು.

ಅಂತ್ಯದಲ್ಲಿ, ಬೃಂದಾವನೀ ರಾಗದ ‘’ ತಿಲ್ಲಾನ’’ ಲವಲವಿಕೆಯಿಂದ ಮೂಡಿಬಂದು ಚೇತೋಹಾರಿಯಾಗಿತ್ತು. ಚೈತನ್ಯಭರಿತ ರಾಹುಲನ ಉತ್ಸಾಹ-ಸಂಭ್ರಮಗಳುಇದರಲ್ಲಿ ಗರಿಗಟ್ಟಿದ್ದವು. ರಂಗವನ್ನು ಪರಿಪೂರ್ಣವಾಗಿ ಬಳಸಿಕೊಂಡ ಕಲಾವಿದ, ಭೂಮಿ, ಉದಕ, ವಾಯು ಇತ್ಯಾದಿ ಇಡೀ ಜಗತ್ತಿಗೆ ಮಂಗಳ ಕೋರಿ ಪ್ರಸ್ತುತಿಯನ್ನು ಸಂಪನ್ನಗೊಳಿಸಿದ. ನೃತ್ತಗಳನ್ನು ಸಲೀಸಾಗಿ ನಿಭಾಯಿಸುವ ಇವನು, ಅಭಿನಯವನ್ನು ಕರಗತಗೊಳಿಸಿಕೊಂಡರೆ ಭರವಸೆಯ ಕಲಾವಿದನಾಗಿ ಹೊರಹೊಮ್ಮಬಲ್ಲ. ನೃತ್ಯಕ್ಕೆ  ಕಳೆಗಟ್ಟಿಸಿದ ಸಹ ಕಲಾವಿದರು – ಗಾಯನದಲ್ಲಿ ರಘುರಾಮ್, ಮೃದಂಗದಲ್ಲಿ ಪುರುಷೋತ್ತಮ್, ವಯೊಲಿನ್-ಮಧುಸೂದನ್ ಮತ್ತು ಗುರು ಪ್ರಶಾಂತ ಗೋಪಾಲ್ ಶಾಸ್ತ್ರಿ ಅವರ ನಟುವಾಂಗ ಸ್ಫೂರ್ತಿದಾಯಕವಾಗಿದ್ದವು.

****************************

ವೈ.ಕೆ.ಸಂಧ್ಯಾ ಶರ್ಮ  

Leave a Comment