ಮನೆ ಹರಾಜಿಗೆ ಅಂಜಿ ಮಾಲೀಕ ನೇಣಿಗೆ ಶರಣು

ಬೆಂಗಳೂರು, ಸೆ. ೧೧- ಬ್ಯಾಂಕ್‌ನವರು ಮನೆಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲು ಹೊರಟಿದ್ದಕ್ಕೆ ನೊಂದ ಬಟ್ಟೆ ಅಂಗಡಿ ಮಾಲೀಕರೊಬ್ಬರು ಸಹಾಯಕಿಯಾಗಿದ್ದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿರುವ ದಾರುಣ ಘಟನೆ ವಿವೇಕನಗರದಲ್ಲಿ ನಡೆದಿದೆ.
ವಿವೇಕನಗರದ ಹೊನ್ನಾರ್ ಪೇಟೆಯ ಮಾಯಾಬಜಾರ್‌ನ ರವೀಂದ್ರನ್ (69) ಅಂಗಡಿಯಲ್ಲಿ ಸಹಾಯಕಿಯಾಗಿದ್ದ ಉಮ (60) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೂ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೊಮ್ಮಲೂರಿನ ರವೀಂದ್ರನ್ ಹಲವು ವರ್ಷಗಳಿಂದ ಮಾಯಾಬಜಾರ್‌ನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡು ಅದರಲ್ಲೇ ಟೈಲರ್ ಕೆಲಸ ಮಾಡಿಕೊಂಡಿದ್ದರು. ಇವರಿಗೆ ವಿವಾಹವಾಗಿದ್ದು, ಪುತ್ರ ಸಾಫ್ಟ್‌ವೇರ್ ಕಂಪನಿಯನ್ನು ನಡೆಸುತ್ತಿದ್ದಾನೆ.
ರವೀಂದ್ರನ್ ಅವರ ಪತ್ನಿಯ ಅಕ್ಕನ ಮಗಳು ಅಮೆರಿಕಾಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಿದ್ದರು. ಅಮೆರಿಕಾಕ್ಕೆ ಹೋಗಲು ರವೀಂದ್ರನ್ ಅವರ ಮನೆಯ ಮೇಲೆ ಸುಮಾರು 2 ಕೋಟಿ ರೂ. ವರೆಗೆ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು.
ಅಮೆರಿಕಾಕ್ಕೆ ಹೋದ ಆಕೆ ಸಾಲ ಮರುಪಾವತಿಗೆ ಹಣ ಕಳುಹಿಸಿರಲಿಲ್ಲ. ಇದರಿಂದ ಸಾಲ, ಸಾಲದ ಬಡ್ಡಿ ಬೃಹದಾಕಾರವಾಗಿ ಬೆಳೆದು, ಬ್ಯಾಂಕ್‌ನವರು, ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯವು ಮನೆಯನ್ನು ಮುಟ್ಟುಗೋಲು ಹಾಕುವಂತೆ ಬ್ಯಾಂಕ್‌‌ಗೆ ಆದೇಶಿಸಿತ್ತು. ಇನ್ನೇನು ಬ್ಯಾಂಕ್‌ನವರು ಮನೆ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲಿದ್ದು, ಇದರಿಂದ ತೀವ್ರವಾಗಿ ರವೀಂದ್ರನ್ ಮನನೊಂದಿದ್ದರು.
ರವೀಂದ್ರನ್ ಅವರ ಪತ್ನಿಯು ಮೂರು ದಿನಗಳ ಹಿಂದೆ ಮಗಳ ಮನೆಗೆ ಹೋಗಿದ್ದರು. ಮಗ ಕೂಡ ಕಂಪನಿಯ ಕೆಲಸದ ಮೇಲೆ ಹೋಗಿದ್ದರು. ಈ ಸಮಯ ನೋಡಿಕೊಂಡ ರವೀಂದ್ರನ್ ಅವರು ಅಂಗಡಿಗೆ ಬಂದು ಒಳಗಿನಿಂದ ಚಿಲಕ ಹಾಕಿ ಬಾಗಿಲು ಭದ್ರಪಡಿಸಿ ಜೊತೆಯಲ್ಲಿದ್ದ ಉಮ ಅವರನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂಗಡಿಯಿಂದ ನಿನ್ನೆ ರಾತ್ರಿ ದುರ್ನಾತ ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಅಂಗಡಿಯ ಮಾಲೀಕರಿಗೆ ವಿಷಯ ತಿಳಿಸಿದ್ದು, ಬಾಗಿಲು ಒಡೆದು ನೋಡಿದಾಗ ಇಬ್ಬರು ಮೃತಪಟ್ಟಿದ್ದರು. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದವು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ವಿವೇಕ್ ನಗರ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

Leave a Comment