ಮನೆ-ಮನಸ್ಸು ಸ್ವಚ್ಚವಾಗಿದ್ದರೆ ಪ್ರತಿಷ್ಠೆಗೆ ಸ್ಥಾನ

ಹುಳಿಯಾರು, ಡಿ. ೭- ಪ್ರತಿಯೊಬ್ಬ ನಾಗರಿಕ ಮನೆ ಮತ್ತು ಮನಸ್ಸನ್ನು ಸ್ವಚ್ಛವಾಗಿರಿಸಿಕೊಂಡಲ್ಲಿ ಸಮಾಜದಲ್ಲಿ ಗೌರವದ ಜತೆಗೆ ಪ್ರತಿಷ್ಠೆಗೆ ಸ್ಥಾನ ಇರುತ್ತದೆ ಎಂದು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಚಂದನಾ ತಿಳಿಸಿದರು.

ಪಟ್ಟಣದ ಕೋಡಿಪಾಳ್ಯದ ಸೇವಾಲಾಲ್  ಸಾಂಸ್ಕೃತಿಕ ಸದನದಲ್ಲಿ ಗ್ರಾಮಿಣ ಕೂಟ ಹಾಗೂ ನವ್ಯವಿಕ ಸಹಯೋಗದೊಂದಿಗೆ ನೀರು ಮತ್ತು ನೈರ್ಮಲ್ಯ ಕುರಿತ ಸಾಮಾಜಿಕ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಕೋಳಿ ಕೂಗುವ ಮುನ್ನವೇ ಜಮೀನುಗಳ ಕಡೆಗೆ ಬಹಿರ್ದೆಸೆಗೆ ಹೋಗಿ ಬರುವ ವೇಳೆ ಹಳ್ಳ, ಹೊಳೆ, ಕೆರೆ ತಪ್ಪಿದಲ್ಲಿ ಹೊಂಡದಲ್ಲಿ ಜಳಕ ಮಾಡಿಕೊಂಡು ಬರುತ್ತಿದ್ದ ದಿನಗಳು ಈಗ ಬದಲಾವಣೆಗೊಂಡಿವೆ. ಶೌಚಾಲಯ ಇಲ್ಲದಿದ್ದಲ್ಲಿ ಮಗನಿಗೆ ಹೆಣ್ಣು ನೀಡುವುದಿಲ್ಲ ಎನ್ನುವ ಪರಿಸ್ಥಿತಿಗೆ ಬಂದಿರುವ ಹಿನ್ನೆಲೆಯಲ್ಲಿ ಇನ್ನಾದರೂ ಗ್ರಾಮಸ್ಥರು ಶುಚಿತ್ವದ ಬಗ್ಗೆ ಅರಿವು ಬೆಳೆಸಿಕೊಳ್ಳುವ ಜತೆಗೆ ಸರ್ಕಾರದ ಸ್ವಚ್ಛ ಭಾರತ ಯೋಜನೆ ಹಣಕಾಸು ಸೌಲಭ್ಯ ಪಡೆದು ಶುಚಿತ್ವ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

ಹಿರಿಯ ಆರೋಗ್ಯ ಅಧಿಕಾರಿ ವೆಂಕಟರಾಮಯ್ಯ ಮಾತನಾಡಿ, ಎಲ್ಲರು ಸಹ ಶೌಚಾಲಯ ಬಳಸಿ ಇಲ್ಲದಿದ್ದರೆ ನೀವು ಬಯಲು ಮಲವಿಸರ್ಜನೆಯಿಂದ ವಾಂತಿ, ಬೇದಿ, ಅತಿಸಾರ, ಟೈಪೈಡ್, ಜಾಂಡೀಸ್ ಮತ್ತಿತರ ರೋಗಗಳು ಹರಡುತ್ತವೆ ಎಂದರಲ್ಲದೆ, ಎಲ್ಲರು ಸಹ ಶುದ್ಧ ನೀರನ್ನು ಸೇವಿಸಬೇಕು ಇಲ್ಲದಿದ್ದರೆ ಪ್ಲೋರೈಡ್‌ನಿಂದ ಹಲ್ಲು ಕಂದು ಬಣ್ಣಕ್ಕೆ ಬರುತ್ತದೆ ಹಾಗೆಯೇ ಮಲೇರಿಯ, ಡೆಂಗ್ಯೂ ಇನ್ನಿತರೆ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮೀಣಕೂಟ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರನ್ನಾಗಿಸಲು ಸ್ವಾವಲಂಬಿ ಜೀವನ ನಡೆಸಬೇಕು. ಬಹುಮುಖ್ಯವಾಗಿ ಗುಡಿಕೈಗಾರಿಗೆ ಮಾಡಬೇಕು ಎಂದು ಕಿವಿ ಮಾತು ಹೇಳಿದರಲ್ಲದೆ, ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮಂಜುನಾಥ್, ವಲಯ ವ್ಯವಸ್ಥಾಪಕ ಸೂರ್ಯನಾರಾಯಣ್, ಶಾಖಾ ವ್ಯಾವಸ್ಥಾಪಕ ಸಣ್ಣೀರಪ್ಪ, ರವೀಂದ್ರ ಎಂ.ಹೆಗ್ಗೆಡೆ, ಟಿ.ಮಂಜುನಾಥ್, ಚೇತನ್ ಮತ್ತಿತರರು ಉಪಸ್ಥಿತರಿದ್ದರು.

Leave a Comment