ಮನೆ-ಮಠ ಹಾನಿ ಪರಿಹಾರ ಹೆಚ್ಚಳ : ಪ್ರವಾಹ ಸಂತ್ರಸ್ಥರಿಗೆ ಬಿಎಸ್‌ವೈ ಸಾಂತ್ವನ

ಬೆಳಗಾವಿ, ಸೆ. ೧೦- ಮಳೆ ಹಾಗೂ ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ಬೀದಿಗಿಳಿದಿರುವ ಸಂತ್ರಸ್ಥರಿಗೆ ಪರಿಹಾರ ಮತ್ತು ಪುನರ್ ವಸತಿ ಕಲ್ಪಿಸಲು ರಾಜ್ಯಸರ್ಕಾರ ಮುಂದಾಗಿದೆ.

  • ಸಂತ್ರಸ್ಥರ ನೆರವಿಗೆ ಸರ್ಕಾರ.
  •  ಸಿಎಂ ಭರವಸೆ.
  •  ಸ್ನ್ಯಾಕ್, ಬಿಸ್ಕೆಟ್ ತಿಂದು ನಿತ್ಯದ ಜೀವನ.
  •  ಜನರ ನರಕಯಾತನೆ.
  •  ಮಮ್ಮಲ ಮರುಗಿದ ಮುಖ್ಯಮಂತ್ರಿ ಯಡಿಯೂರಪ್ಪ,.
  •  ಮನೆ ಕಳೆದುಕೊಂಡವರಿಗೆ ಅಗತ್ಯ ಪರಿಹಾರದ ಭರವಸೆ.

ಪ್ರವಾಹದಿಂದ ಮನೆ ಕುಸಿದು ವಾಸಿಸಲು ಯೋಗ್ಯವಲ್ಲದಂತಹ ಮನೆಗಳಿಗೆ 50 ಸಾವಿರ ರೂ. ಹಾಗೂ ಸಂಪೂರ್ಣ ಕುಸಿದು ಬಿದ್ದಿರುವ ಮನೆಗಳಿಗೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡರೂ ಸಂತ್ರಸ್ಥರಿಗೆ ಪರಿಹಾರ ನೀಡುವ ಕಾರ್ಯವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಸಂತ್ರಸ್ಥರು ಆತಂಕಗೊಳ್ಳುವುದು ಬೇಡ. ನಿಮ್ಮ ಜತೆ ಸರ್ಕಾರ ಇದೆ ಎಂದು ಅವರು ಭರವಸೆ ನೀಡಿದ್ದಾರೆ.

ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರವಾಹಪೀಡಿತ ಜನರ ಅಹವಾಲು ಆಲಿಸಲು ಆಗಮಿಸಿದ ವೇಳೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಳೆ ಹಾಗೂ ಪ್ರವಾಹದಿಂದ ಬದುಕು ಕಳೆದುಕೊಂಡವರಿಗೆ ಅಗತ್ಯ ಪರಿಹಾರಕ್ಕಾಗಿ 10 ಸಾವಿರ ರೂ. ನೀಡಲಾಗಿದೆ ಎಂದು ತಿಳಿಸಿದರು.

ಇದುವರೆಗೆ ಪ್ರವಾಹಪೀಡಿತ 1 ಲಕ್ಷ 10 ಸಾವಿರ ಸಂತ್ರಸ್ಥರಿಗೆ 10 ಸಾವಿರ ರೂ.ನಂತೆ ಪರಿಹಾರ ನೀಡಲಾಗಿದೆ. ಸಂತ್ರಸ್ಥರ ಸಮಸ್ಯೆಗಳಿಗೆ ಹಾಗೂ ಅವರ ನೋವಿಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದರು.
ವಾಸಿಸಲು ಯೋಗ್ಯವಲ್ಲದ ಹಾಗೂ ಸಂಪೂರ್ಣವಾಗಿ ಮನೆ ಬಿದ್ದಿರುವ ಸಂತ್ರಸ್ಥರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದರು.

ಸಿಎಂ ಸ್ವಾಗತಕ್ಕೆ ಕಾದು ಕುಳಿತಿದ್ದ ಜಾರಕಿಹೊಳಿ
ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸ್ವಾಗತಿಸಲು ಸಾಂಮ್ರ ವಿಮಾನ ನಿಲ್ದಾಣದಲ್ಲಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕಾದು ಕುಳಿತಿದ್ದರು.

ಮುಖ್ಯಮಂತ್ರಿಗಳು ವಿಶೇಷ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆಯೇ ರಮೇಶ್ ಜಾರಕಿಹೊಳಿ ಪುಷ್ಪಗುಚ್ಚ ನೀಡಿ ಸ್ವಾಗತ ಕೋರಿ ಕೈ ಕುಲುಕಿದರು.

ವಿಮಾನ ನಿಲ್ದಾಣದಲ್ಲಿ ರಮೇಶ್ ಜಾರಕಿಹೊಳಿಯವರನ್ನು ನೋಡಿ ಮುಖ್ಯಮಂತ್ರಿ ಯಡಿಯೂರಪ್ಪ ಮುಗುಳ್ನಕ್ಕಿ ಅವರ ಬೆನ್ನು ತಟ್ಟಿದ್ದು ಗಮನ ಸೆಳೆಯಿತು.

ಈ ಹಿಂದೆ ಬೆಳಗಾವಿಗೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ಸ್ವಾಗತಕ್ಕೆ ಬಂದಿರಲಿಲ್ಲ. ಈಗ ಶಾಸಕ ಸ್ಥಾನ ಅನರ್ಹಗೊಂಡಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ವಿಮಾನ ನಿಲ್ದಾಣಕ್ಕೆ ಬಂದಿದ್ದು ರಾಜಕೀಯವಾಗಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜತೆ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂತ್ರಸ್ಥರ ಮೂಕ ರೋಧನೆ
ಬೆಳಗಾವಿ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಸುರೇಬಾನ, ಚಿಕ್ಕಹಂಪಿ ಹೊಳಿ, ಹಿರೇಪಂಪಿ ಹೊಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಳೆ ಹಾಗೂ ಪ್ರವಾಹದಿಂದ ಸಂತ್ರಸ್ಥರಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಅಹವಾಲು ಆಲಿಸಿ ನಿಮ್ಮ ಜತೆ ಸರ್ಕಾರ ಇದೆ ಎನ್ನುವ ಸಾಂತ್ವನದ ಭರವಸೆ ನೀಡಿದ್ದಾರೆ.

ಈ ವೇಳೆ ಸಂತ್ರಸ್ಥರು ಬಿಸ್ಕೆಟ್, ಸ್ನ್ಯಾಕ್ಸ್ ತಿಂದು ಬದುಕು ಸವೆಸುತ್ತಿದ್ದೇವೆ. ಪರಿಹಾರ ಕೇಂದ್ರಗಳಲ್ಲಿ ರೋಗ-ರುಜಿನಗಳಿಂದ ಮಕ್ಕಳೂ ಸೇರಿದಂತೆ ವಯೋವೃದ್ಧರು ನರಳಾಡುವಂತಾಗಿದೆ. ಹೀಗಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ತಮ್ಮ ನೋವನ್ನು ಮುಖ್ಯಮಂತ್ರಿ ಅವರ ಮುಂದೆ ಹೊರ ಹಾಕಿದರು.

ಜನರ ನೋವು-ಯಾತನೆಯನ್ನು ಕಂಡು ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಷಣಕಾಲ ಮಮ್ಮಲ ಮರುಗಿ, ಆತಂಕಗೊಳ್ಳುವುದು ಬೇಡ, ಭಯವೂ ಬೇಡ ನಿಮ್ಮ ಜತೆ ಸರ್ಕಾರ ನಿಲ್ಲಲಿದೆ. ಅಗತ್ಯವಿರುವ ಎಲ್ಲ ಪರಿಹಾರವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಅಧಿಕಾರಿಗಳ ಮೋಜು
ಪ್ರವಾಹಪೀಡಿತ ಸಂತ್ರಸ್ಥರು ಪರಿಹಾರ ಕೇಂದ್ರಗಳಲ್ಲಿ ಅಗತ್ಯ ಆಹಾರ ಸಾಮಗ್ರಿಗಳಿಲ್ಲದೆ ಪರದಾಡುತ್ತಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಅಧಿಕಾರಿಗಳು ನೂರಾರು ಸ್ನ್ಯಾಕ್ ಪ್ಯಾಕೆಟ್‌ಗಳು ಕೂಲ್‌ಡ್ರಿಂಕ್ಸ್‌ಗಳನ್ನು ಕಾರಿನಲ್ಲಿ ತುಂಬಿಕೊಂಡು ಮೋಜು-ಮಸ್ತಿಯಲ್ಲಿದ್ದ ದೃಶ್ಯ ಕಂಡು ಬಂತು.
ಜನರು ಊಟವಿಲ್ಲದೆ ಪರದಾಡುತ್ತಿದ್ದರೆ, ಅಧಿಕಾರಿಗಳು ತಮಗೆ ಬೇಕಾದ ಬಗೆ ಬಗೆಯ ತಿಂಡಿಗಳನ್ನು ಕಾರಿನಲ್ಲಿ ತುಂಬಿಕೊಂಡು ಸಂತ್ರಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಿಎಂ ಸ್ವಾಗತಕ್ಕೆ ಕಾದು ಕುಳಿತಿದ್ದ ಜಾರಕಿಹೊಳಿ
ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸ್ವಾಗತಿಸಲು ಸಾಂಮ್ರ ವಿಮಾನ ನಿಲ್ದಾಣದಲ್ಲಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕಾದು ಕುಳಿತಿದ್ದರು.

ಮುಖ್ಯಮಂತ್ರಿಗಳು ವಿಶೇಷ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆಯೇ ರಮೇಶ್ ಜಾರಕಿಹೊಳಿ ಪುಷ್ಪಗುಚ್ಚ ನೀಡಿ ಸ್ವಾಗತ ಕೋರಿ ಕೈ ಕುಲುಕಿದರು.

ವಿಮಾನ ನಿಲ್ದಾಣದಲ್ಲಿ ರಮೇಶ್ ಜಾರಕಿಹೊಳಿಯವರನ್ನು ನೋಡಿ ಮುಖ್ಯಮಂತ್ರಿ ಯಡಿಯೂರಪ್ಪ ಮುಗುಳ್ನಕ್ಕಿ ಅವರ ಬೆನ್ನು ತಟ್ಟಿದ್ದು ಗಮನ ಸೆಳೆಯಿತು.

ಈ ಹಿಂದೆ ಬೆಳಗಾವಿಗೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ಸ್ವಾಗತಕ್ಕೆ ಬಂದಿರಲಿಲ್ಲ. ಈಗ ಶಾಸಕ ಸ್ಥಾನ ಅನರ್ಹಗೊಂಡಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ವಿಮಾನ ನಿಲ್ದಾಣಕ್ಕೆ ಬಂದಿದ್ದು ರಾಜಕೀಯವಾಗಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜತೆ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment