ಮನೆ ಕಳ್ಳರ ಸೆರೆ 7 ಲಕ್ಷ ಮಾಲು ವಶ

ಬೆಂಗಳೂರು, ಅ. ೨೧- ದುಶ್ಚಟ, ಮೋಜಿಗಾಗಿ, ಮನೆ ಕಳವು, ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿರುವ ಗಿರಿನಗರ ಪೊಲೀಸರು, 7 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಗಳು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಗರಾಜ್ ಅಲಿಯಾಸ್ ಎಸಿ (22), ಕೌಶಿಕ್ (22), ವಿಜಯ್ ಕುಮಾರ್ ಅಲಿಯಾಸ್ ವಿಜಯ್ (26), ಗಂಗಾಧರ್ ಅಲಿಯಾಸ್ ಗಂಗ (22), ರೇಣುಕುಮಾರ್ ಅಲಿಯಾಸ್ ಟಾಂಗು (24), ಶ್ರವಣ (20) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 7.35 ಲಕ್ಷ ರೂ. ಗಳ 200 ಗ್ರಾಂ ಚಿನ್ನಾಭರಣ, 21 ದ್ವಿಚಕ್ರ ವಾಹನಗಳು, 14 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಗಿರಿನಗರದ 5 ಮನೆಕಳವು, ಗಿರಿನಗರದ, ಕೆಂಗೇರಿಯ ತಲಾ – 3, ಸುಬ್ರಮಣ್ಯಪುರ, ರಾಜರಾಜೇಶ್ವರಿ ನಗರ ತಲಾ – 2, ಕಗ್ಗಲಿಪುರ, ಕಲಾಸಿಪಾಳ್ಯ ತಲಾ – 1 ಸೇರಿ, 21 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳಾದ ಎಸಿ ಕೌಶಿಕ್ ಹಾಗೂ ರೇಣುಕುಮಾರ್ ಅವರುಗಳು ಸಿ.ಕೆ. ಅಚ್ಚುಕಟ್ಟು, ಕೆ.ಜಿ. ನಗರ, ರಾಜರಾಜೇಶ್ವರಿ ನಗರ, ರಾಜಗೋಪಾಲ ನಗರ, ಇನ್ನಿತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಲಿಗೆ, ಕನ್ನಗಳವು, ದ್ವಿಚಕ್ರ ವಾಹನಗಳ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ರೋಹಿಣಿ ಕಟೋಚ್ ತಿಳಿಸಿದ್ದಾರೆ.
ಆರೋಪಿಗಳಲ್ಲಿ ಮೂವರು ಹಳೆಕಳ್ಳರಾಗಿದ್ದು, ಜೈಲಿಗೆ ಹೋಗಿಬಂದ ನಂತರವೂ ದುಶ್ಚಟಗಳಿಗಾಗಿ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಖಚಿತ ಮಾಹಿತಿ ಮೇರೆಗೆ ಗಿರಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ, ಮತ್ತವರ ಸಿಬ್ಬಂದಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment