ಮನೆಗೆ ಹಿಂದಿರುಗಿದವರಿಗೆ ಹಾವು, ಮೊಸಳೆಯ ಸ್ವಾಗತ!

ತಿರುವನಂತಪುರ, ಆ. ೨೨- ದೇವರನಾಡು ಕೇರಳದಲ್ಲಿ ಮಳೆ ಅಬ್ಬರ ಕಡಿಮೆಯಾಗಿ ನೆರೆ ಇಳಿಯುತ್ತಿದ್ದಂತೆಯೇ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಜನ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಂತೆಯೇ ಅವರಿಗೆ ಹಾವು, ಮೊಸಳೆ ಸೇರಿದಂತೆ ವಿಷ ಜಂತುಗಳ ಸ್ವಾಗತ ಸಿಕ್ಕಿದ್ದು, ಜನ ಮತ್ತೆ ಬೆಚ್ಚಿ ಬೀಳುವಂತಾಗಿದೆ.
ಮಳೆಯಿಂದ ಮನೆ ತೊರೆದು ಹೋಗಿದ್ದ ಜನರ ಮನೆಯಲ್ಲಿ ಈಗ ಮೊಸಳೆ, ಹಾವು, ಹಲ್ಲಿ, ಚೇಳು ಮುಂತಾದ ವಿಷ ಜಂತುಗಳ ದಂಡೇ ಆಶ್ರಯ ಪಡೆದಿವೆ.

ಮಳೆ ನೀರಿನಿಂದ ಕೆಸರು ತುಂಬಿರುವ ಮನೆಗಳನ್ನು ಸ್ವಚ್ಛ ಮಾಡಲು ಜನ ಹೆದರುತ್ತಿದ್ದು, ಈಗಾಗಲೇ 52 ಮಂದಿ ಎರ್ನಾಕುಲಂ ಅಂಗನಮಲೆ ಆಸ್ಪತ್ರೆಯಲ್ಲಿ ಹಾವು ಕಡಿತದ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಪ್ರವಾಹದಿಂದ ನಲುಗಿರುವ ಅಲಫುಝಾ ಪಾತನಂ ತಿತ್ತಾ, ಇಡಕಿ ಜಲಾಶಯ ಕೋಚಿಕೋಡ್, ಎರ್ನಾಕುಲಂ ಯಲ್ಲಾಪುರಂ, ವೈನಾಡು ಜಿಲ್ಲೆಗಳ ಬಹುತೇಕ ಮನೆಗಳಲ್ಲಿ ವಿಷ ಜಂತುಗಳು ಸೇರಿಕೊಂಡಿವೆ.

ಮನೆಯಲ್ಲಿದ್ದ ಮೊಸಳೆ

ತ್ರಿಶೂರಿನ ಚಾಲಾಕುಡಿಯಲ್ಲಿ ಮೊಸಳೆಯೊಂದು ಮನೆಗೆ ಸೇರಿದ್ದು, ನಿರಾಶ್ರಿತರ ಶಿಬಿರದಿಂದ ಮನೆಗೆ ಬಂದ ಮನೆಯ ಒಳಗೆ ಮೊಸಳೆ ಇರುವುದನ್ನು ಕಂಡು ಭಯಹೀತರಾಗಿದ್ದು, ತಕ್ಷಣ ನೆರೆಹೊರೆಯವರ ಸಹಾಯದಿಂದ ಮೊಸಳೆಯನ್ನು ಹಗ್ಗದಲ್ಲಿ ಕಟ್ಟಿ ಅದನ್ನು ಮನೆಯಿಂದ ಹೊರ ಹಾಕುವಲ್ಲಿ ಸಫಲರಾಗಿದ್ದಾರೆ.

ನೆರೆ ಇಳಿಯುತ್ತಿದ್ದಂತೆಯೇ ಮನೆಗಳಲ್ಲಿರುವ ಹಾವುಗಳನ್ನು ಹಿಡಿಯುವುದರಲ್ಲಿ ಜನ ತೊಡಗಿದ್ದು, ಹಾವುಗಳನ್ನು ಹಿಡಿಯುವವರಿಗೆ ಈಗ ಬಿಡುವಿಲ್ಲದ ಕೆಲಸವಾಗಿದೆ.

ಹಾವುಗಳನ್ನು ಹಿಡಿಯುವುದರಲ್ಲಿ ಪರಿಣಿತರಾಗಿರುವ ಮಲ್ಲಾಪುರಂ ಜಿಲ್ಲೆ ಒಂದರಲ್ಲೇ ಕಳೆದ ಎರಡು ದಿನಗಳಿಂದ 100 ಹಾವುಗಳನ್ನು ಮನೆಗಳಲ್ಲಿ ಹಿಡಿದು ಹೊರ ತಂದಿದ್ದಾರೆ.

ನೆರೆ ಬಂದಾಗ ಹಾವುಗಳು ಈ ರೀತಿ ಮನೆಗಳಲ್ಲಿ ಆಶ್ರಯ ಪ‌ಡೆಯುವುದು ಸಹಜ. ಹಾಗಾಗಿ ಜನ ಮನೆಗಳನ್ನು ಸ್ವಚ್ಚಗೊಳಿಸುವಾಗ ಜಾಗೃತ ವಹಿಸಬೇಕು ಎಂದು ಈ ಹಾವು ಪರಿಣಿತರು ಹೇಳಿದ್ದಾರೆ.

Leave a Comment