ಮನೆಗೆ ಬೆಂಕಿ ಹಚ್ಚಿ ಮೂವರ ಕೊಂದ ಆರೋಪಿಗೆ ಗುಂಡು

ಕಲಬುರಗಿ,ಜು.12-ಪತ್ನಿಯ ಸಹೋದರನ ಮೇಲಿನ ಸಿಟ್ಟಿಗೆ ಆತನ  ಮನೆಗೆ ಬೆಂಕಿ ಇಟ್ಟು ಮೂವರ ಸಾವಿಗೆ ಕಾರಣವಾಗಿದ್ದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿ ಮಹ್ಮದ್ ಮುಸ್ತಫಾನ ಎರಡು ಕಾಲಿಗೆ ಗುಂಡು ಬಿದ್ದಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ಹೊರವಲಯದಲ್ಲಿರುವ ‌ರಾಯಲ್ ದಾಬಾ ಬಳಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಮುಂದಾದಾಗ ಬ್ರಹ್ಮಪುರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಾಳಗಿ ಆರೋಪಿ ಮಹ್ಮದ್ ಮುಸ್ತಫಾ ಮೇಲೆ ಗುಂಡು ಹಾರಿಸಿದ್ದಾರೆ.

ಇದೇ ತಿಂಗಳು (ಜು.4 ) ರಂದು ನಗರದ ಇಕ್ಬಾಲ್ ಕಾಲೋನಿಯಲ್ಲಿರುವ ಸೈಯದ್ ಅಕ್ಬರ್ ಮನೆಗೆ ಆರೋಪಿ ಮುಸ್ತಫಾ ಮನೆಯ ಹೊರಗಿನಿಂದ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಘಟನೆಯಲ್ಲಿ ಅಕ್ಬರ್ ಕುಟುಂಬದ ನಾಲ್ವರಿಗೆ ಬೆಂಕಿ ತಗುಲಿತ್ತು. ಅದರಲ್ಲಿ ಸೈಯದ್ ಅಕ್ಬರ್, ಅವರ ಪತ್ನಿ ಶಹನಾಜ್ ಬೇಗಂ, ಪುತ್ರಿ ಸಾನಿಯಾ ಬೇಗಂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಪುತ್ರ ಸೈಯದ್ ಯಾಸಿನ್ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ತಫಾನನ್ನು ಅಜ್ಮೀರದಲ್ಲಿ ಪೊಲೀಸರ ಮೊನ್ನೆ ಬಂಧಿಸಿದ್ದರು.ಆರೋಪಿ ಮುಸ್ತಫಾ ಬಳಿಯಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲು ಮುಸ್ತಫಾ ನನ್ನು ಕರೆದುಕೊಂಡು ಇಂದು ಮುಂಜಾನೆ ಹೋದ ಸಂದರ್ಭದಲ್ಲಿ ಮುಸ್ತಫಾ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ. ಈ ವೇಳೆ ಆತನ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸರ್ದಾರ ಪಟೇಲ್, ಸಲೀಂ ಪಟೇಲ್ ಮತ್ತು ಶಿವಲಿಂಗ ಅವರು ಗಾಯಗೊಂಡಿದ್ದು, ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಸ್ಪಿ ಎನ್.ಶಶಿಕುಮಾರ, ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಎ ಉಪ ವಿಭಾಗದ ಡಿಎಸ್ಪಿ ಲೋಕೇಶ್  ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

 

Leave a Comment