ಮನೆಗೆ ನುಗ್ಗಿ ಚಿನ್ನ, ಕಾರು ಕಳವು ಮಾಡಿ ಮೂರು ವರ್ಷಗಳ ಬಳಿಕ ಸಿಕ್ಕಿಬಿದ್ದ

ಬೆಂಗಳೂರು, ಜು. ೧೮- ಬೀಗ ಮುರಿದು ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ದೋಚಿ, ಮುಂಭಾಗ ನಿಲ್ಲಿಸಿದ್ದ ಕಾರನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮೂರು ವರ್ಷಗಳ ಬಳಿಕ ಬಂಧಿಸುವಲ್ಲಿ ಹೆಬ್ಬಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಹೊಸೂರಿನ ಆದಿಲ್ ಅಲಿಯಾಸ್ ಆದಿಲ್ ಖಾನ್ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 9 ಲಕ್ಷ ರೂ. ಮೌಲ್ಯದ ಹೊಂಡಾ ಬ್ರಿಯೋ ಕಾರು, 30 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಹೆಬ್ಬಾಳದ ಕನಕನಗರದ ಇಫ್ತಿಕಾರ್ ಅಹಮದ್ ಅವರು ಕಳೆದ 2016ರ ಜುಲೈ 6 ರಂದು ಮನೆಗೆ ಬೀಗ ಹಾಕಿಕೊಂಡು ರಂಜಾನ್ ಆಚರಣೆಗಾಗಿ ಕುಟುಂಬ ಸಮೇತ ಹರಿದ್ವಾರಕ್ಕೆ ಹೋಗಿದ್ದರು. ಅಲ್ಲಿಂದ ಜುಲೈ 21 ರಂದು ವಾಪಾಸ್ ಆಗಿ ನೋಡಿದಾಗ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಇರಲಿಲ್ಲ.
ಮನೆಯ ಬೀಗ ತೆಗೆದು ನೋಡಿದಾಗ ಹಿಂಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಬಂಧಿತ ಆರೋಪಿ ಆದಿಲ್ ಕ್ಯಾಮರಾ, ಲ್ಯಾಪ್‌ಟಾಪ್, ಚಿನ್ನಾಭರಣ ಕಳವು ಮಾಡಿ ಅಲ್ಲಿದ್ದ ಕೀ ಯನ್ನು ತೆಗೆದುಕೊಂಡು ಹೊರಗೆ ಬಂದು ಕಾರು ಕಳವು ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿದ್ದ ಹೆಬ್ಬಾಳ ಪೊಲೀಸರು ಕಾರ್ಯಾಚರಣೆ ಕೈಗೊಂಡು ಮೂರು ವರ್ಷಗಳ ಬಳಿಕ ಕೃಷ್ಣಗಿರಿ ಬಳಿ ಕಳವು ಮಾಡಿದ್ದ ಕಾರು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ಕೃಷ್ಣಗಿರಿ ಹೊಸೂರಿನಲ್ಲಿ ಮೊಬೈಲ್ ಕಳವು, ಮನೆಗಳವು ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಇನ್ಸ್‌ಪೆಕ್ಟರ್ ಆರ್.ಎಸ್.ಟಿ. ಖಾನ್ ಅವರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

Leave a Comment