ಮನೆಗೆ ನುಗ್ಗಿ ಕಳವು

ಬಂಟ್ವಾಳ, ಸೆ. ೧೧- ಖಾಸಗಿ ಸರ್ವೇಯರ್ ಮನೆಗೆ ಹಾಡಹಗಲೇ ನುಗ್ಗಿರುವ ಕಳ್ಳರು ಕಪಾಟಿನ ಕೀ ಬಳಸಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವುಗೈದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಎಸ್‌ವಿಎಸ್ ಕಾಲೇಜ್ ಬಳಿ ಸೋಮವಾರ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಬಂಟ್ವಾಳ ಬಿ.ಕಸ್ಬಾ ಗ್ರಾಮದ ಎಸ್‌ವಿಎಸ್ ಕಾಲೇಜ್ ರಸ್ತೆಯಲ್ಲಿರುವ ಭದ್ರಕಾಳಿ ಕಟ್ಟೆಯ ಬಳಿಯಿರುವ ಖಾಸಗಿ ಸರ್ವೇಯರ್ ಲೋಹಿತ್ ಎನ್. ಎಂಬವರಿಗೆ ಸೇರಿದ ಮನೆಯಲ್ಲಿ ಈ ಕೃತ್ಯ ನಡೆದಿದೆ. ಇವರ ಬಚ್ಚಲು ಮನೆಯ ಸಿಮೆಂಟ್ ಸೀಟ್ ತೆಗೆದು ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಬೆಡ್ ರೂಂನಲ್ಲಿದ್ದ ಕಪಾಟಿನ ಬೀಗ ತೆರವುಗೈದು ನಗ, ನಗದನ್ನು ಕಳವುಗೈದಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಲೋಹಿತ್ ಅವರ ಪತ್ನಿ ಸೋಮವಾರ ಮಧ್ಯಾಹ್ನ ೧೨ ಗಂಟೆಯ ಹೊತ್ತಿಗೆ ಮನೆ ಸಾಮಗ್ರಿ ಖರೀದಿಸಲೆಂದು ಬಂಟ್ವಾಳ ಪೇಟೆಗೆ ತೆರಳಿದ ಸಂದರ್ಭವನ್ನು ಕಳ್ಳರು ಸದುಪಯೋಗಪಡಿಸಿ ಈ ಕಳವು ಕೃತ್ಯ ನಡೆಸಿರಬೇಕೆಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂಟ್ವಾಳ ಉಪವಿಭಾಗದ ಎಎಸ್ಪಿ ಸೈದುಲು ಅಡಾವತ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್ಸೈ ಸುಧಾಕರ ತೋನ್ಸೆ, ನಗರ ಠಾಣಾ ಎಸ್ಸೈ ಚಂದ್ರಶೇಖರ್ ಮತ್ತವರ ಸಿಬ್ಬಂದಿ ಹಾಗೂ ಶ್ವಾನದಳ, ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Leave a Comment