ಮನುಷ್ಯ ವಿರೋಧಿ ಮನುಸ್ಮೃತಿ

ಬೆಂಗಳೂರು, ಏ. ೧೬-ಮನುಸ್ಮೃತಿ ಮನುಷ್ಯ ವಿರೋಧಿ, ಅದನ್ನು ಸುಟ್ಟು ಹಾಕಬೇಕೆಂದು ಹೇಳಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅಲ್ಲ. ಬದಲಾಗಿ ಬ್ರಾಹ್ಮಣರೇ ಎಂದು ದಲಿತ ಕವಿ ಡಾ.ಸಿದ್ದಲಿಂಗಯ್ಯ ಹೇಳಿದರು.

ನಗರದಲ್ಲಿಂದು ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಆಯೋಜಿಸಿದ್ದ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೨೮ನೇ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

೧೯೨೭ರ ಸಾಲಿನ ಡಿಸೆಂಬರ್ ಮಾಸದಲ್ಲಿ ಅಂಬೇಡ್ಕರ್ ಅವರು ಮನುಸ್ಮೃತಿ ಅನ್ನು ಸಮಾಧಿ ಮಾಡಿದರು. ಆದರೆ, ಇದಕ್ಕೂ ಮೊದಲು ಪ್ರಚಂಡ ಬ್ರಾಹ್ಮಣರಾದ ಸಾಹಸ್ರ ಬುದ್ದೇ ಅವರು, ಮನುಸ್ಮೃತಿ ಸುಟ್ಟು ಹಾಕಬೇಕೆಂದು ಪ್ರಸ್ತಾವನೆ ಸಲ್ಲಿಸಿದರು.

ಮನುಸ್ಮೃತಿನಲ್ಲಿ ಶೂದ್ರರನ್ನು ಹೀನಾಯ ಸ್ಥಿತಿಗೆ ತಳ್ಳಲಾಗಿದೆ. ಹೀಗಾಗಿ, ಈ ಮನುಸ್ಮೃತಿ ಸುಟ್ಟು ಹಾಕಿ, ಬಳಿಕ ಅಂಬೇಡ್ಕರ್ ಅವರೇ ಸಂವಿಧಾನ ಬರೆದರು.

ಇನ್ನೂ, ಅಂಬೇಡ್ಕರ್ ಅವರು ಒಂದು ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲ. ಬದಲಾಗಿ ಎಲ್ಲಾ ಕೋಮಿನವರು ಅಧ್ಯಯನ ಮಾಡುತ್ತಿದ್ದಾರೆ. ಅವರ ವಿಚಾರಧಾರೆ ಗಳನ್ನು ತಿಳಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ಮೂಲೆಗುಂಪು ಆಗಿದೆ. ಹೀಗಾಗಿ, ಬೆಂಗಳೂರು ಕೇಂದ್ರ ವಿವಿಯೂ, ಕನ್ನಡ ಉಳಿಸುವ ಪಣ ತೊಟ್ಟು, ಹೊಸ ಕಾರ್ಯಕ್ರಮಗಳ ಮೂಲಕ ಕನ್ನಡ ಬೆಳವಣಿಗೆ ವಾತಾವರಣ ನಿರ್ಮಿಸಬೇಕು ಎಂದು ನುಡಿದರು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಜಾಫೆಟ್ ಮಾತನಾಡಿ, ಏಪ್ರಿಲ್೧೪ ರಂದು ಎಲ್ಲಾ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರ ಭಜನೆ ಮಾಡುತ್ತಿವೆ.ಅಷ್ಟೇ ಅಲ್ಲದೆ, ಸೈದ್ದಾಂತಿಕ ವಾಗಿ ವಿರೋಧಿಸುವವರು ಸಹ ಅವರನ್ನು ಆರಾಧನೆ ಮಾಡುತ್ತಿದ್ದಾರೆ.

ಅಂಬೇಡ್ಕರ್ ಅವರು, ಭಾರತಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ, ಜಾಗತಿಕ ಮಟ್ಟದಲ್ಲಿ ಅವರು ಚಿರಪರಿಚಿತರು. ಇನ್ನೂ, ಅವರ ಜನ್ಮ ದಿನವನ್ನು ’ವಿಶ್ವ ಜ್ಞಾನ ದಿನ’ ಎಂದು ಆಚರಣೆ ಮಾಡಲಾಗುತ್ತಿದೆ. ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಅವರ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕುಲ ಸಚಿವ ಪ್ರೊ.ಎಂ.ರಾಮಚಂದ್ರ ಗೌಡ, ಬರಹಗಾರ್ತಿ ಡಾ.ಅನುಸೂಯ ಕಾಂಬ್ಳೆ ಸೇರಿದಂತೆ ಪ್ರಮುಖರಿದ್ದರು.

’ವಿಶ್ವವಿದ್ಯಾಲಯಗಳಲ್ಲಿ ಜಾತಿ’

ರಾಜಕಾರಣದಲ್ಲೇ ಮಾತ್ರವಲ್ಲದೆ, ವಿಶ್ವವಿದ್ಯಾಲಯ, ವಿದ್ಯಾರ್ಥಿಗಳಲ್ಲಿ ಜಾತಿ ವಿಷ ಬೀಜ ಬಿತ್ತಲಾಗಿದೆ. ಇದರಲ್ಲಿ ಸಾಕಷ್ಟು ಮಂದಿ ಸಿಲುಕಿಕೊಂಡಿರುವುದು ನಮ್ಮ ಸಮಾಜದ ದುರಂತ.

– ಪ್ರೊ.ಎಸ್.ಜಾಫೆಟ್, ಕುಲಪತಿ

Leave a Comment