ಮನುಷ್ಯನ ನೆಮ್ಮದಿ ಬದುಕಿಗೆ ಧಾರ್ಮಿಕ ಕಾರ್ಯ ಅಗತ್ಯ

ಕೊರಟಗೆರೆ, ಮೇ ೧೯- ಮನುಷ್ಯ ಸಮಚಿತ್ತದಿಂದ ಇರಲು ಗ್ರಾಮಗಳ ದೇವರು, ದೇವಾಲಯಗಳು ಅತ್ಯವಶ್ಯಕ ಎಂದು ಎಲೇರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸೀಗೆಪಾಳ್ಯ ಗ್ರಾಮದಲ್ಲಿ ವಜ್ರಕಾಯ ಆಂಜನೇಯ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಮನುಷ್ಯ ನಿತ್ಯವೂ ಒಂದಿಲ್ಲೊಂದು ಒತ್ತಡದಲ್ಲಿ ಬದುಕುತ್ತಿರುತ್ತಾನೆ.

ಇದರಿಂದ ಹೊರ ಬರಲು ಮನಸ್ಸನ್ನು ಏಕಚಿತ್ತದಲ್ಲಿ ಇಟ್ಟುಕೊಟ್ಟಲು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಪೂರ್ವಿಕರು ಊರಿಗೊಂದು ದೇವಾಲಯ ನಿರ್ಮಿಸಿ ನಿತ್ಯವೂ ಪೂಜಾ ಕೈಂಕರ್ಯಗಳೊಂದಿಗೆ ಧ್ಯಾನ ಮಾಡುತ್ತಿದ್ದರು. ಇದರಿಂದಲೇ ಅವರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿದ್ದರು. ಇದನ್ನು ನಾವು ಮರೆಯಬಾರದು.

ಅವರ ಮಾರ್ಗದರ್ಶನದಂತೆ ನಾವು ಪ್ರತಿನಿತ್ಯ ಸಮಯ ಸಿಕ್ಕಾಗ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಾಂತಿ ನೆಮ್ಮದಿ ಕಾಣಬೇಕು ಎಂದರು.

ಬೆಳ್ಳಾವಿಯ ರುದ್ರಮನಿ ಮಠದ ರುದ್ರಮುನಿ ಮಹಾಸ್ವಾಮೀಜಿ ಮಾತನಾಡಿ, ಪ್ರತಿ ಆಚರಣೆಗೂ ಒಂದು ವಿಶೇಷತೆ ಇದೆ. ಅದನ್ನು ಆಚರಿಸುವಾಗ ಅದರ ಅರ್ಥವನ್ನು ತಿಳಿದು ಆಚರಿಸಿದರೆ ಹೆಚ್ಚು ಪರಿಣಾಮಕಾರಿ ಎಂದರು.

ಕಾರ್ಯಕ್ರಮದಲ್ಲಿ ಮೈಸೂರಿನ ಶಾಂತವರತನಂದ ಮಹಾರಾಜ್ ಸ್ವಾಮೀಜಿ, ದೇವಾಲಯ ಕಟ್ಟಡದ ದಾನಿಗಳಾದ ಶಿವಣ್ಣ ಮತ್ತು ಸಿದ್ದಲಿಂಗಮ್ಮ ದಂಪತಿಗಳು,  ಗ್ರಾಮದ ಮುಖಂಡರಾದ ಹನುಮಂತರಾಯಪ್ಪ, ಗೋವಿಂದರಾಜು, ಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Comment