ಮನುಕುಲದ ಉದ್ಧಾರಕ್ಕೆ ಅವತರಿಸಿದ್ದ ಸಿದ್ದಗಂಗಾಶ್ರೀ

ಮಧುಗಿರಿ, ಫೆ. ೧೧- ಮನುಕುಲದ ಉದ್ಧಾರಕ್ಕೆಂದು ಅವತರಿಸಿದ ಸಿದ್ಧಗಂಗಾ ಪರಂಪರೆಯ ಶ್ರೇಷ್ಠಯತಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಭೌತಿಕವಾಗಿ ಕಣ್ಮರೆಯಾಗಿದ್ದಾರೆ. ಆದರೆ ಭೌದ್ಧಿಕವಾಗಿ ಕರ್ನಾಟಕ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಹೃನ್ಮನಗಳಲ್ಲಿ ಪೂಜಿಸುತ್ತಿದ್ದಾರೆ ಎಂದು ತುಮಕೂರಿನ ಆಯುರ್ವೇದ ವಿದ್ವಾನ್ ಹಾಗೂ ಲೇಖಕ ಎಂ. ನಂಜುಂಡಸ್ವಾಮಿ ಹೇಳಿದರು.

ತಾಲ್ಲೂಕಿನ ಗಂಜಲಗುಂಟೆ ಗ್ರಾಮದ ಶ್ರೀ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಾರಾಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮೀಜಿಯವರು ಬಡವ, ಬಲ್ಲಿದ, ಮೇಲು, ಕೀಳು, ಮತಭೇದವಿಲ್ಲದೆ ಲಕ್ಷೋಪಲಕ್ಷ ಹಸಿದ ಉದರಕ್ಕೆ ಅನ್ನ, ಜ್ಞಾನ, ಭಕ್ತಿಯ ಲೇಪನವನ್ನು ಮಾಡಿದ ಮಹಾನ್ ಶಿಲ್ಪಿ. ಶ್ರೀಗಳು ಜೋಳಿಗೆಯಲ್ಲಿ ಭಿಕ್ಷೆಯನ್ನು ಬೇಡಿ ಮಠ ಕಟ್ಟಿದ ಕೀರ್ತಿ ಕಳಸ ಮಾತ್ರವಲ್ಲದೆ, ಬದುಕಿನ ಪೂರ್ಣತೆಯ ಪಾಠವನ್ನು ಕಲಿಸಿದ ಮಹಾನ್ ಯೋಗಿ ಎಂದರು.

ಮಧುಗಿರಿ ತಾಲ್ಲೂಕು ಕ.ಸಾ.ಪ ಮಾಜಿ ಅಧ್ಯಕ್ಷ ಮರಿಬಸಪ್ಪ ಮಾತನಾಡಿ, ತ್ರಿವಿಧ ದಾಸೋಹಿಗಳಾಗಿದ್ದ ಶ್ರೀಗಳ ದಾಸೋಹ ಉಂಡವರಿಗೆ ಭಕ್ತಿ ಸಿಂಚನದ ಶಕ್ತಿ ಚೈತನ್ಯವಾಗಿದೆ. ಅದಕ್ಕಾಗಿಯೇ ಶಿವಗಂಗೆ ನೋಟಕ್ಕೆ ಚಂದ, ಸಿದ್ಧಗಂಗೆ ಊಟಕ್ಕೆ ಚಂದ ಎಂದು ನುಡಿದರು.

ಕೆ.ಎಸ್. ಉಮಾ ಮಹೇಶ್ ಮಾತನಾಡಿ, 1980 ರಲ್ಲಿ ಸಿದ್ಧಗಂಗೆ ಹೆಸರಿನಲ್ಲಿ ಶ್ರೀಗಳು ಈ ಶಾಲೆ ಪ್ರಾರಂಭಿಸಿ ಸಾವಿರಾರು ರೈತರ ಮಕ್ಕಳಿಗೆ ವಿದ್ಯೆ ಸಿಗಲೆಂದು ಆಶೀರ್ವದಿಸಿದ್ದರು. ಮಧುಗಿರಿ ತಾಲ್ಲೂಕಿನ ಜನತೆಯ ಭಕ್ತಿ ಪರವಶತೆಗೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದರು.

ಹಳೆಯ ವಿದ್ಯಾರ್ಥಿಗಳಾದ ಪ್ರಸಾದ್, ಚೆನ್ನಪ್ಪ, ಪ್ರೇಮ, ಬಾಬು, ಚಂದ್ರಶೇಖರಯ್ಯ, ನಿರಂಜನ್ ಮುಂತಾದವರು ಪುಣ್ಯಾರಾಧನೆಯ ನೇತೃತ್ವ ವಹಿಸಿದ್ದರು.

Leave a Comment