ಮನಸ್ಸನ್ನು ಗೆದ್ದವರು ಯೋಗಿಗಳು

ದಾವಣಗೆರೆ.ಅ.12; ದೈಹಿಕ ಆರೋಗ್ಯಕ್ಕೆ ಒತ್ತು ನೀಡಿದಂತೆ ಮಾನಸಿಕ ಆರೋಗದತ್ತ ಗಮನಹರಿಸಬೇಕೆಂದು ಹಿರಿಯ ನ್ಯಾಯಾಧೀಶರಾದ ಕೆಂಗಬಾಲಯ್ಯ ಸಲಹೆ ನೀಡಿದ್ದಾರೆ.
ನಗರದ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜೆಜೆಎಂ ಮೆಡಿಕಲ್ ಕಾಲೇಜಿನ ಮಾನಸಿಕ ಆರೋಗ್ಯ ವಿಭಾಗ, ಬಾಪೂಜಿ ಪಾಲಿಟೆಕ್ನಿಕ್ ಕಾಲೇಜು, ಮಾನಸಿಕ ಆರೋಗ್ಯ ಸಂಘದ ಸಹಯೋಗದಲ್ಲಿ ಕಾಲೇಜಿನ ಆವರಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಯುವ ಜನತೆ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತದಿನದಲ್ಲಿ ದೇಹಕ್ಕೆ ವ್ಯಾಯಾಮ, ಜಿಮ್ ಮಾಡುತ್ತೇವೆ ಆದರೆ ಮನಸ್ಸಿನ ನೆಮ್ಮದಿಯತ್ತ ಆಲೋಚನೆ ನಡೆಸುತ್ತಿಲ್ಲ.ಆತ್ಮಸ್ಥೈರ್ಯ, ಸ್ಥೀಮಿತತೆಯನ್ನು ಕಳೆದುಕೊಂಡು ಆತ್ಮಹತ್ಯೆ ಪ್ರಯತ್ನಕ್ಕೆ ಮುಂದಾಗುತ್ತಿದ್ದೇವೆ. ಮನುಷ್ಯ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೆ ಇವುಗಳ ಆಲೋಚನೆಯಿಂದ ಹೊರಬರಬಹುದು. ಯಾರು ಮನಸ್ಸನ್ನು ಗೆಲ್ಲುತ್ತಾರೋ ಅವರು ಯೋಗಿಗಳು. ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಲು ಪ್ರತಿನಿತ್ಯ ಧ್ಯಾನ ಮಾಡಬೇಕು. ಮಾನಸಿಕ ರೋಗಿಗಳಾಗುವುದು ಶಾಪವಲ್ಲ. ಅದು ಹುಟ್ಟಿನಿಂದ ಮತ್ತು ಅಪಘಾತವಾದ ಸಂದರ್ಭದಲ್ಲಿ ಬರುವಂತಹದ್ದು.ಧ್ಯಾನ,ಮಹಾತ್ಮರ ಕಥೆಗಳು ಮತ್ತು ಸಂಗೀತದಿಂದ ಮನಸ್ಸಿನ ನಿಯಂತ್ರಣ ಸಾಧ್ಯ ಎಂದರು.
ಡಾ.ವಿರೇಶ್ ಮಾತನಾಡಿ ಮಾನಸಿಕ ಒತ್ತಡ ಹೆಚ್ಚಾಗಿ ಕೆಲವರು ಮನಸ್ಸಿನ ಸ್ಥೀಮಿತ ಕಳೆದುಕೊಳ್ಳುತ್ತಾರೆ ಹಾಗೂ ಆತ್ಮಹತ್ಯೆಗೆ ಮುಂದಾಗುತ್ತಾರೆ. ಇಂತಹ ಆಲೋಚನೆಗಳಿಂದ ಮೊದಲು ಹೊರಬರಬೇಕು. ಯುವಕರಲ್ಲಿ ಒತ್ತಡ ಉಂಟಾಗುವ ಬಗ್ಗೆ ಸಂಶೋಧನೆಗಳ ಅಗತ್ಯವಿದೆ. ಸಮಸ್ಯೆಗಳು ಬರುತ್ತವೆ ಹಾಗೂ ಹೋಗುತ್ತವೆ ಅದರೆ ಬಗ್ಗೆ ಚಿಂತಿಸದೆ ದಿಟ್ಟವಾಗಿ ಎದುರಿಸುವುದು ಮುಖ್ಯ ಎಂದು ಸಲಹೆ ನೀಡಿದರು.
ಈ ವೇಳೆ ಡಾ.ಸಿ.ವೈ ಸುದರ್ಶನ್,ಡಾ.ಸುರೇಶ್ ಪ್ರಭಾಕರ್,ಶಕುಂತಲ,ರಾಮಮೂರ್ತಿ, ವಿನಾಯಕ್ ಕುಂದಾಪುರ ಇದ್ದರು.

Leave a Comment