ಮನಸೂರೆಗೊಂಡ ವರ್ಷಿಣಿಯ ನೃತ್ಯ ಸೊಬಗು

ಸಾಮಾನ್ಯವಾಗಿ ಭರತನಾಟ್ಯದ ‘ಮಾರ್ಗಪದ್ಧತಿಯಲ್ಲಿ ನಾಟ್ಯ ಮಾಡುವ ಕೃತಿಗಳ ಒಂದು ಅನುಕ್ರಮಣಿಕೆ ಇರುತ್ತದೆ. ಅದರಂತೆ  ‘ರಂಗಪ್ರವೇಶ’ದಲ್ಲಿ ಕನಿಷ್ಠ ಏಳುಕೃತಿಗಳನ್ನಂತೂ ಪ್ರಸ್ತುತಪಡಿಸಲಾಗುತ್ತದೆ. ವಿದ್ಯಾರ್ಥಿಯ ಸಾಮರ್ಥ್ಯವನ್ನರಿತು ನಾಟ್ಯಗುರುಗಳು, ಕೃತಿಗಳನ್ನು ಆಯ್ಕೆಮಾಡಿ ಜಾಣ್ಮೆಯಿಂದ ನೃತ್ಯ ಸಂಯೋಜನೆ ಮಾಡುವುದು ವಾಡಿಕೆ. ರಂಗಪ್ರವೇಶ ಮಾಡುವ ಕಲಾವಿದೆಯ ಪ್ರತಿಭೆ-ಕೌಶಲಗಳನ್ನು ಹಿನ್ನಲೆಯಲ್ಲಿರಿಸಿಕೊಂಡು ಆಯಾ ಗುರುಗಳು ಪ್ರದರ್ಶನದಲ್ಲಿ ನೃತ್ತ-ಅಭಿನಯಗಳ ಪ್ರಾಧಾನ್ಯವನ್ನು ನಿರ್ಧರಿಸುತ್ತಾರೆ. ಜೊತೆಗೆ ರಸಾಭಿವ್ಯಕ್ತಿಯಲ್ಲಿ ಅವರ ವಯಸ್ಸನ್ನೂ ಗಮನದಲ್ಲಿರಿಸಿಕೊಂಡು ಕೃತಿಗಳ ಹೂರಣ ಮತ್ತು ನಿರೂಪಣೆಯನ್ನು ಸಂಯೋಜಿಸಿರುತ್ತಾರೆ. ಇದು ಪ್ರತಿಯೊಂದು ‘ರಂಗಪ್ರವೇಶ’ದ ಸಂದರ್ಭದಲ್ಲೂ ತುಂಬ ಮಹತ್ವ ಪಡೆದುಕೊಳ್ಳುವ ಸಂಗತಿ.

ಇದರಿಂದ ಗುರು-ಶಿಷ್ಯರಿಬ್ಬರಿಗೂ ರಸಿಕರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಸಮರ್ಪಣೆಯ ತೃಪ್ತಿ ದೊರೆಯುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ‘’ನೃತ್ಯಧಾಮ ಟೆಂಪಲ್ ಆಫ್ ಫೈನ್ ಆರ್ಟ್ಸ್‘ ನೃತ್ಯ ಸಂಸ್ಥೆಯ ಸ್ಥಾಪಕಿ ಹಾಗೂ ನಿರ್ದೇಶಕಿ, ಭರತನಾಟ್ಯ ಹಾಗೂ ಮೋಹಿನಿಯಾಟ್ಟಂನ ಪ್ರಸಿದ್ಧ ನಾಟ್ಯಗುರು ಯುವ ಕಲಾಭಾರತಿ ಡಾ. ರೇಖಾರಾಜು ಬಹು ಇಂಗಿತಜ್ಞರು.

ಅಂದು ರಂಗಪ್ರವೇಶ ಮಾಡಿದ್ದು ಹದಿಮೂರರ ಎಳೆಬಾಲೆ ವರ್ಷಿಣಿ ವೆಂಕಟಸುಬ್ರಮಣ್ಯನ್. ಅವಳ ವಯಸ್ಸು ಮತ್ತು ಸುಕೋಮಲ ದೇಹಶಕ್ತಿಗೆ ಹೊಂದುವಂಥ ಸುಂದರ ಕೃತಿಗಳನ್ನೇ ಆರಿಸಿಕೊಂಡು ಅವಳ ಸಂಪೂರ್ಣ ಪ್ರತಿಭೆ ಹೊರಹೊಮ್ಮುವಂತೆ ನೃತ್ಯ ಕಾರ್ಯಕ್ರಮದ ಚೌಕಟ್ಟನ್ನು ರೂಪಿಸಿದ್ದರು ಗುರು ರೇಖಾರಾಜು. ತೆಳು ಮೈಕಟ್ಟಿನ ಗಾಜಿನಗೊಂಬೆಯಂತಿದ್ದ ವರ್ಷಿಣಿ ನಗುಮೊಗದಿಂದ ರಂಗಪ್ರವೇಶಿಸಿ, ಮೊದಲಿಗೆ ವಿಘ್ನ ವಿನಾಶಕ ವಿನಾಯಕನಿಗೆ ವಿನಮ್ರತೆಯಿಂದ ಹೆಜ್ಜೆಹಾಕುತ್ತ ನಮಿಸಿದಳು. ಶುಭಾರಂಭದಲ್ಲಿ ‘ಪ್ರಭೋ ಗಣಪತೆ’-ಎಂಬ ಸುಶ್ರಾವ್ಯ ಹಾಡುಗಾರಿಕೆಯ ಪ್ರವೀಣರ ಕಂಠ, ವರ್ಷಿಣಿಯ ಮನೋಹರ ಅಭಿನಯದ ಗಣಪತಿಯ ವಿಶಿಷ್ಟ ಭಂಗಿಗಳಿಗೆ, ಅಚ್ಚುಕಟ್ಟಾದ ನೃತ್ತಗಳಿಗೆ ಕಳೆಗಟ್ಟಿಸಿತು. ವೇದಿಕೆಯ ಮೇಲೆ ಹಸನ್ಮುಖದಿಂದ, ಯಾವುದೇ ಗೊಂದಲಗಳಿಲ್ಲದೆ ನೀಟಾಗಿ ನೃತ್ತಗಳನ್ನು, ಆತ್ಮವಿಶ್ವಾಸದಿಂದವಳು ನಿರೂಪಿಸಿದ್ದು ಗಮನಾರ್ಹ ಅಂಶವಾಗಿತ್ತು.

ಅನಂತರ ತಿಶ್ರ ಜಾತಿಯ ರೂಪಕತಾಳದ ‘ ಅಲ್ಲರಿಪು’ ವನ್ನು ಕಲಾವಿದೆ ಹಿತಮಿತವಾದ ಅಳತೆಯಲ್ಲಿದ್ದ ವಿವಿಧ ನೃತ್ತಗಳು , ಅರೆಮಂಡಿಯ ಸುಂದರ ಅಡವುಗಳು ಮತ್ತು ಖಚಿತ ಹಸ್ತಮುದ್ರೆಗಳಿಂದ ಸುಮನೋಹರವಾಗಿ ನಿರೂಪಿಸಿದಳು. ಮುಂದಿನ ನೃತ್ಯ ಪ್ರಸ್ತುತಿಗಳಿಗೆ ಸಿದ್ಧತಾರೂಪದಲ್ಲಿದ್ದ, ತಾಲೀಮಿನಂತೆ ಭಾಸವಾಗುತ್ತಿದ್ದ ವಿವಿಧ ವಿನ್ಯಾಸದ ನೃತ್ತಗಳು, ಅಡವುಗಳನ್ನು ‘ಅಲ್ಲರಿಪು’ ಒಳಗೊಂಡಿತ್ತು. ಬಿಲ್ಲಿನಂತೆ ನುಣುಪಾಗಿ ಬಾಗುವ ಅವಳ ತೆಳುಕಟಿ ಹಾಗೂ ಮೊಗದ ಸ್ನಿಗ್ಧಕಳೆ ಸೊಗಸನ್ನು ಬಿಂಬಿಸಿತ್ತು. ತಂಜಾವೂರು ಸಹೋದರರು ರಚಿಸಿದ ರಾಗಮಾಲಿಕೆ-ಮಿಶ್ರ ಛಾಪು ತಾಳದ ‘ಜತಿಸ್ವರ’ದಲ್ಲಿ ನಿರೂಪಿಸಲಾದ ಶುದ್ಧನೃತ್ತಗಳು ಚುರುಕಾಗಿದ್ದವು. ಕಲಾವಿದೆ ಪ್ರದರ್ಶಿಸಿದ ದೃಷ್ಟಿಭೇದ ಹಾಗೂ ಗ್ರೀವಭೇದಗಳು ಆಕರ್ಷಕವಾಗಿದ್ದವು. ಈ ಕೃತಿಯ ನೃತ್ತಗಳು ನವವಿನ್ಯಾಸದಿಂದ ಕೂಡಿದ್ದರಿಂದ ಯಾಂತ್ರಿ ಕವೆನಿಸಲಿಲ್ಲ. ರೇಖಾರಾಜು ಅವರ ಖಡಕ್ ನಟುವಾಂಗ ಲಯಾತ್ಮಕವಾಗಿ ಮೆಚ್ಚುಗೆ ಮೂಡಿಸಿತ್ತು.

ದಾಸಶ್ರೇಷ್ಠ ಪುರಂದರದಾಸರ ದೇವರನಾಮಗಳು ಎಂದೂ ಜನಪ್ರಿಯವೇ. ಕಲಾವಿದರಿಗೆ ಅಭಿನಯಿಸ ಲಂತೂ ಪ್ರಿಯವಾದದ್ದೇ. ನವರಸಭಾವಗಳೂ ಪ್ರವಹಿಸಲು ವಿಪುಲ ಅವಕಾಶ.  ‘ಯಮನೆಲ್ಲೂ ಕಾಣನೆಂದು ಹೇಳಬೇಡ’ ಎಂಬ ಕೃತಿ (ಶಿವರಂಜಿನಿ ರಾಗ) ರಾಮದೇವರ ಕರುಣಾಮಯ ಮುಖದ ಜೊತೆ ದುಷ್ಟ ಶಿಕ್ಷೆಯ ಕ್ರೂರ ಮುಖವನ್ನೂ ಏಕಕಾಲಕ್ಕೆ ಸಾಕ್ಷೀಕರಿಸುವಂಥದ್ದು. ಕಾಯುವ ದೇವನೇ ಕೊಲ್ಲುವ ಯಮನಾಗುತ್ತಾನೆ ಎಂಬ ತತ್ವದ,  ‘ಪಾಪ-ಪುಣ್ಯ ಗಳ ಕರ್ಮಕ್ಕೆ ತಕ್ಕಂಥ ಫಲ ಕರುಣಿಸುವ ಅನೇಕ ದೃಷ್ಟಾಂತಗಳನ್ನು ದಾಸರು ನೀಡುತ್ತಾರೆ.

ವಿಧೇಯ ವಿಭೀಷಣನಿಗೆ ರಾಮನಾದವನೇ, ದುರಹಂಕಾರಿ ರಾವಣನಿಗೆ ಯಮಸ್ವರೂಪಿಯಾದ, ನಂಬಿದ ಅರ್ಜುನನಿಗೆ ಮಿತ್ರನಾದ, ನಂಬದ ದುರ್ಯೋಧನನಿಗೆ ಶತ್ರುವಾದ ಎಂಬ ಪ್ರಸಂಗ ನಿರೂಪಣೆಯ ಸಂಚಾರಿಭಾಗದಲ್ಲಿ ವರ್ಷಿಣಿ ತನ್ನ ಅಭಿನಯ ಪ್ರತಿಭೆ ಮೆರೆದಳು. ಯುದ್ಧರಂಗದಲ್ಲಿ ಬಂಧು-ಬಾಂಧವರನ್ನು ಕೊಲ್ಲಲು ಹಿಂತೆಗೆದ ಅರ್ಜುನನಿಗೆ ಕೃಷ್ಣ ಧೈರ್ಯ ಹೇಳುತ್ತ , ತನ್ನ ವಿಶ್ವರೂಪ ತೋರಿ ಅವನಿಗೆ ಒತ್ತಾಸೆಯಾದ ಸನ್ನಿವೇಶವನ್ನು ಕಲಾವಿದೆ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಳು.

ಅಂತಿಮ ಪ್ರಸ್ತುತಿ ದೇಶ್ ರಾಗದ ಲಾಲ್ಗುಡಿ ಜಯರಾಂ ರಚಿತ ‘’ ತಿಲ್ಲಾನ’ ಸಾಗರದ ಅಲೆಗಳಂತೆ ತೀವ್ರ ಭರತದಿಂದ, ವೇಗವಾದ ನೃತ್ತ-ಪದಗತಿಗಳಿಂದ ಸಾಗಿ ವರ್ಷಿಣಿ, ಪುಟವಿಟ್ಟ ಚೆಂಡಿನಂತೆ ನರ್ತಿಸಿ ರಸಿಕರ ಮನಗೆದ್ದಳು. ವಿದ್ವಾನ್ ಜಗದೀಶ್ ಜನಾರ್ದನರ ಶಕ್ತಿಶಾಲಿ ಮೃದಂಗ,ಮುರುಗಾನಂದನರ ಮನಸೂರೆಗೊಂಡ ಪಿಟೀಲು ಮತ್ತು ಡಾ.ವಿನೋದರ ಸುಶ್ರಾವ್ಯ ಮುರಳೀಗಾನ ಗಂಧರ್ವಲೋಕಕ್ಕೆ ಒಯ್ದಿತೆಂದರೆ ಅತಿಶಯೋಕ್ತಿಯಲ್ಲ.      ವೈ.ಕೆ.ಸಂಧ್ಯಾ ಶರ್ಮ

Leave a Comment