ಮನಸು ಹುಚ್ಚು ಮನಸು

ಚಿತ್ರ : ಮನ ಮಂಥನ
ನಿರ್ದೇಶನ : ಸುರೇಶ್ ಹೆಬ್ಳೀಕರ್
ನಿರ್ಮಾಣ : ದಿ. ಡಾ. ಅಶೋಕ್ ಪೈ
ತಾರಾಗಣ : ಕಿರಣ್ ರಜಪೂತ್, ಅರ್ಪಿತಾ, ರಮೇಶ್ ಭಟ್, ಸಂಗೀತ, ಶ್ರೀಧರ್, ಸುರೇಶ್ ಹೆಬ್ಳೀಕರ್ ಮುಂತಾದವರು
ರೇಟಿಂಗ್ : ****

ಮಾನಸಿಕ ಸಮಸ್ಯೆಗಳಿಂದಾಗಿ ಸಾವಿಗೆ ಬಲಿಯಾಗದೆ ಹೊಸ ಜೀವನಕ್ಕೆ ತೆರೆದುಕೊಳ್ಳುವಂತೆ ಜೀವನ ಪ್ರೀತಿಯ ಕಥೆಯನ್ನು ನಿರ್ದೇಶಕ ಸುರೇಶ್ ಹೆಬ್ಳೀಕರ್ ತಮ್ಮದೇ ಆದ ಶೈಲಿಯಲ್ಲಿ ಹೇಳಿರುವ ಚಿತ್ರವಾಗಿದೆ ‘ಮನ ಮಂಥನ’. ಮಲೆನಾಡಿನ ಸುಂದರ ದಾರಿಯಲ್ಲಿ ಕರೆದೊಯ್ದು ನಿಜ ಜೀವನದ ಘಟನೆಯನ್ನು ಕಣ್ಣಿನ ಮುಂದೆ ಹರಡುತ್ತಾರೆ, ಚಿತ್ರ ಪ್ರೇಕ್ಷಕರನ್ನು ಹೊರ ನಿಲ್ಲಿಸಿ ನೋಡಿಸಿಕೊಳ್ಳುವುದಕ್ಕಿಂತ ನಿಧಾನವಾಗಿ ತನ್ನೊಳಗೆ ಎಳೆದುಕೊಂಡು ಮಂಥನಕ್ಕೆ ಹಚ್ಚುತ್ತದೆ.
ನಗರದ ಜಂಜಾಟವಿಲ್ಲದ ಮಲೆನಾಡಿನ ಪ್ರಶಾಂತ ಮಡಿಲಿನಲ್ಲಿಯೇ ಬೆಳೆಯುವ ಅಜಯ್ ತಂದೆಯ ಸಮಾಜ ಪ್ರತಿಷ್ಠೆ, ಮೋಸದ ವ್ಯವಹಾರಕ್ಕೆ ಒಗ್ಗಿಕೊಳ್ಳದ ಮನಸಿನವನಾಗಿರುತ್ತಾನೆ. ತಾಯಿಯ ಆಸೆಯಂತೆ ಇಂಜೀನಿಯರಿಂಗ್ ಓದಿ ಸಂಗೀತ ಕಲಿತು ದೇಶವಿದೇಶದಲ್ಲಿ ಹೆಸರು ಮಾಡಬೇಕೆನ್ನುವ ಸೂಕ್ಷ್ಮ ಮನಸಿನ ಭಾವುಕತೆ ಅವನಲ್ಲಿರುತ್ತದೆ. ಅದರೆ ತಂದೆಗಾಗಿ ಅವನ ಮನಸ್ಸಿಗೆ ವಿರುದ್ಧವಾಗಿ ಬಿ.ಕಾಂ. ಮಾಡಿ ಸಿ.ಎ ಮಾಡಲು ನಗರಕ್ಕೆ ಬರುವ ಅವನಿಗೆ ಅಕೌಂಟೆಂಟ್ ಕೆಲಸ ದಾಸ್ಯವೆನಿಸುತ್ತದೆ. ಅಕೌಂಟೆಂಟ್ ಕೆಲಸ ಮತ್ತು ತಂದೆಯ ವ್ಯವಹಾರ ಮುಂದುವರೆಸಿಕೊಂಡು ಹೋಗಲು ಅವನಿಗೆ ಇಷ್ಟವಿರುವುದಿಲ್ಲ, ತಾಯಿಯನ್ನೂ ಕಳೆದುಕೊಂಡಿರುತ್ತಾನೆ ಇದೆಲ್ಲವೂ ಅವನ ಮನಸ್ಸಿನಲ್ಲಿ ಒತ್ತಡಗಳಾಗಿ ಬೆಳೆಯುತ್ತಲೇ ಇರುತ್ತದೆ. ಇದರಿಂದ ಹೊರಬರಲು ಅವನಿಗೆ ಚೇತೋಹಾರಿಯಾಗಿ ಕಾಣುತ್ತಾಳೆ ಮಾಧುರಿ ಅವಳು ದೂರದ ಸಂಬಂಧಿಯೂ ಆಗಿರುತ್ತಾಳೆ. ಗಣಿತ ಮತ್ತು ಸಂಗೀತದ ಸಮಾನ ಆಸಕ್ತಿ ಅವರನ್ನು ಭಾವುಕವಾಗಿ ಬೆಸೆದು ಪ್ರೀತಿಗೆ ತಂದು ನಿಲ್ಲಿಸುತ್ತದೆ. ಆದರೆ ತಂದೆ ಬಯಸುವಂಥ ಅವರ ವ್ಯವಹಾರವನ್ನು ವಹಿಸಿಕೊಳ್ಳದ ಅವನ ಮತ್ತು ತಂದೆ ನಡುವೆ ಬಿರುಕು ಮೂಡುತ್ತದೆ. ತಂದೆಯ ಎಂಜಲು ತಿಂದುಕೊಂಡು ಇಲ್ಲಿ ಏಕೆ ಇದ್ದೀಯ ಎನ್ನುವ ಕಟು ಮಾತಿಗೆ ಮನೆಯನ್ನು ತೊರೆಯುತ್ತಾನೆ. ಆಗ ಅವನಿಗೆ ಆಸರೆಯಾಗಿ ಕಾಣುವುದು ಮಾಧುರಿ. ಆದರೆ ಅವಳಿಗೆ ತಂದೆ ಇರುವುದಿಲ್ಲ ಅವಳ ತಾಯಿ ಮತ್ತು ಅಜಯ್ ತಂದೆ ಸಂಬಂಧ ಹೊಂದಿದ್ದಾರೆನ್ನುವ ವಿಚಾರ ಗೊತ್ತಾಗಿ ಅವಳು ಆಘಾತಗೊಳ್ಳುತ್ತಾಳೆ. ಮಾಧುರಿಯಿಂದ ಅಜಯ್‌ಗೆ ಆ ಸತ್ಯ ತಿಳಿದಾಗ ಮಾನಸಿಕವಾಗಿ ಭಗ್ನ ಗೊಳ್ಳುತ್ತಾನೆ. ಮಾಧುರಿ ಅವನನ್ನು ಬಿಟ್ಟು ಹೋಗುತ್ತಾಳೆ.
ನಂತರದಲ್ಲಿ ಅಜಯ್ ಆತ್ಮಹತ್ಯಗೆ ಯತ್ನಿಸುತ್ತಾನೆ ಅವನನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಲಾಗುತ್ತದೆ. ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದವರು ಮತ್ತೆ ಪ್ರಯತ್ನಿಸುವ ಸಾಧ್ಯತೆಗಳಿರುತ್ತದೆಂದು ಅಜಯ್‌ಗೆ ಮಾನಸಿಕ ಚಿಕಿತ್ಸೆ ನೀಡಿ ಅವನನ್ನು ಜೀವನ್ಮುಖಿಯಾಗಿಸಲಾಗುತ್ತದೆ. ಜೊತೆಗೆ ಅವನ ಮಾನಸಿಕ ಒತ್ತಡಗಳಿಗೆ ಕಾರಣನಾದ ತಂದೆಗೂ ತನ್ನ ತಪ್ಪಿನ ಅರಿವಾಗುವಂತೆ ವೈದ್ಯರು ಮಾಡುತ್ತಾರೆ. ಈ ಹಂತದಲ್ಲಿ ಬಹು ಸೂಕ್ಷ್ಮವಾಗಿ ಸಿನೆಮಾ ಸಾಗುತ್ತದೆ ಪ್ರೇಕ್ಷಕರು ಆ ವೇಳೆಗೆ ತಮ್ಮ ನಡುವಿನದ್ದೇ ಸಮಸ್ಯೆಯಾಗಿ ನೋಡುವಂತೆ ಚಿತ್ರ ಒಳಗೊಳ್ಳುತ್ತದೆ.
ಭಗ್ನವಾದ ಆಸೆ ಮತ್ತು ಕನಸು ಹೊಸದಾಗಿ ಕಟ್ಟಬಹುದೆನ್ನುವ ಹೊಸ ಜೀವನ ಪ್ರೀತಿಯಲ್ಲಿ ಸಿನೆಮಾದ ಕೊನೆಯಾಗುತ್ತದೆ. ಸುರೇಶ್ ಹೆಬ್ಳೀಕರ್ ಚಿತ್ರಕ್ಕೆ ಮುಕ್ತ ಕೊನೆಯನ್ನು ಕೊಟ್ಟಿರುವುದರಿಂದ ಚಿತ್ರಮಂದಿರದಿಂದ ಹೊರ ಬಂದಾಗ ಪಾತ್ರ ಮತ್ತು ಸಂಬಂಧಗಳು ಕಾಡುತ್ತವೆ .
ಖ್ಯಾತ ಮನೋತಜ್ಞ ದಿ. ಅಶೋಕ್ ಪೈ ಕೊಟ್ಟಿರುವ ಸಾಮಾನ್ಯವಾಗಿ ಕಾಡುವ ಮಾನಸಿಕ ಸಮಸ್ಯೆಯ ಕಥೆಗೆ ಅಚ್ಚುಕಟ್ಟಾದ ಚಿತ್ರಕಥೆ ಕಟ್ಟಿರುವ ಸುರೇಶ್ ಹೆಬ್ಲೀಕರ್ ಸಂಭಾಷಣೆ ಅಗತ್ಯವಿರುವಷ್ಟೇ ಬರೆದಿರುವುದರಿಂದ ದೃಶ್ಯಗಳಲ್ಲಿ ಮೌನವು ಮಾತಾಗುತ್ತದೆ. ಅರೆಸುಟ್ಟು ಬಿದ್ದಿರುವ ಹೆಮ್ಮರದ ಪರಿಸರದಲ್ಲಿ ಮನಸು ಭಗ್ನವಾಗುವ ದೃಶ್ಯವನ್ನು ಅರ್ಥಪೂರ್ಣವಾಗಿ ತಂದಿರುವಂತೆ ಸುರೇಶ್ ಹೆಬ್ಳೀಕರ್ ಚಿತ್ರದ ಅನೇಕ ದೃಶ್ಯಗಳನ್ನು ಪರಿಸರದಲ್ಲಿ ಮಿಳಿತಗೊಳಿಸಿ ಅನಾವರಣ ಮಾಡಿದ್ದಾರೆ. ಹಾರ್‍ಮೋನಿಯಂ ಮತ್ತು ಮಳೆಯ ನೈಜ ಶಬ್ದದ ಹಿನ್ನೆಲೆಯಲ್ಲಿ ಹಾಡೊಂದರ ರಾಗ ಸಂಯೋಜನೆ ಮಾಡಿರುವುದು ಪ್ರವೀಣ್ ಡಿ. ರಾವ್ ಸಂಗೀತ ಹೊಸ ಸೃಜನಶೀಲತೆಯದಾಗಿದೆ. ಅವರ ಹಿನ್ನೆಲೆ ಸಂಗೀತ ಮತ್ತು ಪಿ. ರಾಜನ್ ಛಾಯಾಗ್ರಹಣ ಕಥೆಯ ಗಾಢತೆಯನ್ನು ಪ್ರೇಕ್ಷಕರಿಗೆ ಉತ್ತಮವಾಗಿ ದಾಟಿಸುತ್ತವೆ. ಈ ಚಿತ್ರದ ತಂದೆ ಪಾತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ ಪಡೆದಿರುವ ರಮೇಶ್ ಭಟ್ ಅವರ ಜೊತೆಗೆ ಹೊಸಬರಾದ ನಾಯಕ ಕಿರಣ್, ನಾಯಕಿ ಅರ್ಪಿತಾ, ಶ್ರೀಧರ್ ಮತ್ತು ಸಂಗೀತ ನಟನೆ ಪ್ರತಿ ಪಾತ್ರಗಳ ಛಾಪು ಮೂಡಿಸುತ್ತವೆ.
-ಕೆ.ಬಿ. ಪಂಕಜ

Leave a Comment