ಮನಸುಗಳ ಮದುವೆ ಆಗ್ಹೋಗಿದೆ

“ಬದುಕು-ಸಿನೆಮಾ ಬದುಕು ಹೇಗೆ ಎದುರಾಗುತ್ತೊ ಹಾಗೇ ತೆಗೆದುಕೊಳ್ಳತ್ತೇನೆ” ಎನ್ನುವ ನಟಿ ನಿವೇದಿತಾ ಇದುವರೆಗೆ ತಾನಾಗಿಯೇ ಸಿನೆಮಾ ಅವಕಾಶಗಳನ್ನು ಹುಡುಕಿಕೊಂಡು ಹೋಗಿಲ್ಲ. ಆದರೆ ಅಭಿನಯಿಸಿರುವ ವಿಭಿನ್ನ ಪಾತ್ರಗಳು ಅವರಿಗೆ ಹೆಸರುಕೊಟ್ಟಿವೆ. ಸುಮಾರು ಒಂದೂವರೆ ವರ್ಷ ತೆರೆಮರೆಗೆ ಸರಿದಂತಿದ್ದ ಅವರ ಮುಕ್ತ ಮಾತುಗಳು ಇಲ್ಲಿವೆ.

*ಏಕಾಏಕಿ ಒಂದು ವರ್ಷ ನಿನಾಸಂ ರಂಗತರಬೇತಿಗೆ ಹೋಗಿದ್ರಿ ಪೂರ್ತಿ ಮಾಡಿದ್ರಾ?
ಇಲ್ಲ ಅರ್ಧಕ್ಕೆ ಬಿಟ್ಟು ಬಂದ್ಬಿಟ್ಟೆ ಆದ್ರೆ ಅಲ್ಲಿ ಇದ್ದಷ್ಟು ದಿನ ತುಂಬಾ ಚೆನ್ನಾಗಿತ್ತು.

*‘ಶುದ್ಧಿ’ ಚಿತ್ರ ಯಾವಾಗ ಪೂರ್ತಿ ಮಾಡಿದ್ರಿ ಸುದ್ದಿಯೇ ಇರಲಿಲ್ಲ?
ಹೊಸ ತಂಡ ಮಾಡಿರುವ ಚಿತ್ರ, ಮುಗಿಸಿದ್ಮೇಲೆ ಮಾತಾಡೋಣ ಅನ್ನೋದಿತ್ತು. ನಾನು ನಿನಾಸಂಗೆ ಹೋಗುವ ಮೊದಲೇ ಚಿತ್ರೀಕರಣ ಮುಗಿದಿತ್ತು ಆದ್ರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ಗೆ ತುಂಬಾ ಸಮಯ ತೆಗೆದುಕೊಂಡ್ರು. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದೆ. ಜ್ಯೋತಿ ಹೆಸರಿನ ಪತ್ರಕರ್ತೆ ಪಾತ್ರ ನನ್ನದು. ಸ್ವಯಂಪ್ರೇರಣೆಯಿಂದ ಜವಾಬ್ದಾರಿಗಳನ್ನು ತೆಗೆದುಕೊಂಡು ಕೆಲಸ ಮಾಡುವಂಥ ಹುಡ್ಗಿ ಬೀದಿ ನಾಟಕಗಳನ್ನು ಮಾಡಿಸ್ತಿರ್‍ತಾಳೆ, ಪುಸ್ತಕ ಬರಿತಿರ್‍ತಾಳೆ. ಅವಳದು ಮಹಿಳಾ ದೌರ್ಜನದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುವ ಪಾತ್ರವಾಗಿದೆ.

*ಹೆಣ್ಣಿನ ಮೇಲಿನ ದೌರ್ಜನ್ಯದ ಕುರಿತಾದ ಕಥೆ ‘ಶುದ್ಧಿ’ ಚಿತ್ರವಾಗಿದೆಯಾ?
ಹೆಣ್ಣಿನ ಮೇಲೆ ನಡೆದಿರುವ ದೌರ್ಜನ್ಯದ ಮೂರ್‍ನಾಲ್ಕು ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಚಿತ್ರ.

* ಗೋವಾದಲ್ಲಿ ನಿಮ್ಮ ಮೇಲೆ ಮದ್ಯಪಾನ ಮಾಡಿದವರಿಂದ ದೌರ್ಜನ್ಯ ನಡೆಯುವುದರಲ್ಲಿತ್ತು ಅಷ್ಟರಲ್ಲಿ ಬೇರೊಬ್ಬರು ನೇರವಾಗಿ ಪಾರುಮಾಡಿದರು ಎಂದು ಹೇಳಿದ್ದೀರ?
ಹೌದು ‘ಶುದ್ಧಿ’ ಚಿತ್ರದ ಚಿತ್ರೀಕರಣ ಗೋಕರ್ಣದಲ್ಲಿ ಪೂರ್ಣಗೊಂಡಿತ್ತು ಅಲ್ಲಿಂದ ನಾನೊಬ್ಬಳೇ ಗೋವಾಕ್ಕೆ ಹೋದಾಗ ನಡೆದಿದ್ದ ಘಟನೆ. ಆದರೆ ಇತ್ತೀಚೆಗೆ ‘ಶುದ್ಧಿ’ಯ ಟ್ರೇಲರ್ ಬಿಡುಗಡೆಯಾದಾಗ ಹೇಳಿಕೊಂಡಿದ್ದು ಸುದ್ದಿಯಾಗಿದೆ.

*ತುಂಬಾ ಗ್ಯಾಪ್ ನಂತರ ಮತ್ತೆ ಕಾಣಿಸಿಕೊಳ್ತಿದ್ದೀರಲ್ವಾ?
ಡಿಸೆಂಬರ್-೧ ಚಿತ್ರ ಮತ್ತು ಪರಾಗ ಸ್ಪರ್ಶ ಕಿರುಚಿತ್ರದ ಸಮಯದಲ್ಲಿ ಕಾಣಿಸಿದ್ದು. ಅದಾದ್ಮೇ ಒಂದೊಂದುವರೆ ವರ್ಷಗಳಾಯ್ತು ಇದು ನನ್ಗೆ ಗ್ಯಾಪ್ ಅನ್ಸೋಲ್ಲ.

* ವಿಭಿನ್ನ ಪಾತ್ರಗಳಲ್ಲಿ ನಟಿಸಿರುವುದು ನಿಮ್ಮದೇ ಆಯ್ಕೆನಾ?
ಗೊತ್ತಿಲ್ಲ ನನ್ಗೆ ಸಿಕ್ಕ ಅವಕಾಶಗಳಲ್ಲಿ ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಯಾವ ಸಿನೆಮಾವನ್ನೂ ನಾನು ಹುಡುಕಿಕೊಂಡು ಹೋಗಿಲ್ಲ. ಯಾರೆ ಕೂಗಾಡಲಿ, ಡಿಸೆಂಬರ್-೧, ತಮಿಳು ಊಲಾ ಚಿತ್ರದಲ್ಲಿನ ವೇಶ್ಯೆ ಮತ್ತು ಈಗ ಶುದ್ಧಿ ಚಿತ್ರದಲ್ಲಿನ ಪತ್ರಕರ್ತೆ ಪಾತ್ರ ತುಂಬಾ ವಿಭಿನ್ನವಾಗಿವೆ.

* ನಿಮ್ಮ ಪ್ರತಿಭೆ ತಕ್ಕ ಅವಕಾಶ ಸಿಕ್ಕಿಲ್ಲ ಅಲ್ವಾ?
ನಿಜವಾಗಿ ಈ ಮಾತು ಕೇಳೋಕೆ ಚೆನ್ನಾ. ನೋಡುಗರಿಗೆ ಹಾಗನ್ಸಿದ್ರೆ ಒಳ್ಳೆಯದು ಖುಷಿಯಾಗುತ್ತೆ. ಇನ್ನೂ ಒಳ್ಳೊಳ್ಳೆ ಸಿನೆಮಾಗಳು ಸಿಕ್ಕದ್ದಿದ್ದರೆ ನಟಿಸಬಹುದಿತ್ತೇನೊ.

* ನಿಮ್ಮ ವಿಚಾರ-ವಿಹಾರ-ಹವ್ಯಾಸ ವಿಭಿನ್ನವೆನಿಸುತ್ತೆ?
ನಾನಂತು ನಾನಿರುವಂತೆ ವ್ಯಕ್ತವಾಗ್ತೀನಿ ಮತ್ತು ಹಾಗೇನೇ ಭಾವನೆಗಳನ್ನು, ವಿಚಾರಗಳನ್ನು ವ್ಯಕ್ತಪಡಿಸುವುದರಿಂದ ವಿಭಿನ್ನ ಅನ್ನಿಸಬಹುದೇನೊ.

* ಮದುವೆ ಯಾವಾಗ?
ಮದುವೆ ಆಗುವ ಆಲೋಚನೆ ಇಲ್ಲ. ಆದ್ರೆ ಮನಸುಗಳಿಗೆ ಆತ್ಮಗಳಿಗೆ ಮದುವೆ ಆಗ್ಹೋಗಿದೆ. ಊಟ ಆಗೋದ್ಮೇಲೆ ಇನ್ನೊಂದು ಸರ್ತಿ ಊಟ ಮಾಡೋಕಾಗೋಲ. ಮದುವೆ ಇಲ್ಲದೆ ಪ್ರೀತಿಯ ಮೇಲೆ ಕಟ್ಟಿರುವ ಸಂಬಂಧಕ್ಕೆ ಸಮಾಜ ಬೆಲೆ ಕೊಡುತ್ತೊ? ಇಲ್ವೊ? ನನ್ಗೆ ಗೊತ್ತಿಲ್ಲ, ಅದು ನಮ್ಗೆ ಬೇಕೂ ಆಗಿಲ್ಲ. ಹಾಗಂತ ನಾನು ಮದುವೆಗೆ ವಿರುದ್ಧ ಇಲ್ಲ.
-ಕೆ.ಬಿ. ಪಂಕಜ

Leave a Comment