ಮನಮಿಡಿಯುವ ಪ್ರೇಮಕಥೆ

ಚಿತ್ರ: ಮನಸು ಮಲ್ಲಿಗೆ
ನಿರ್ದೇಶನ: ಎಸ್ ನಾರಾಯಣ್
ನಿರ್ಮಾಣ : ರಾಕ್‌ಲೈನ್ ವೆಂಕಟೇಶ್, ಆಕಾಶ್ ಚಾವ್ಲಾ
ತಾರಾಗಂ : ನಿಶಾಂತ್, ರಿಂಕು ರಾಜ್‌ಗುರು, ಅರವಿಂದ್ ರಾವ್, ಪದ್ಮ ಮುಖ್ಯಮಂತ್ರಿ ಚಂದ್ರು ಮತ್ತಿತರರು
ರೇಟಿಂಗ್ : ***
ಪ್ರೀತಿಗೆ ಜಾತಿ,ಮತ ಬಡವ ಬಲ್ಲಿದ ಎನ್ನುವ ಬೇಧವಿಲ್ಲ ಅದು ಸಾರ್ವತ್ರಿಕ ಎಂದು ಸಾರಿ ಹೇಳುವ ಮುದ್ದಾದ ಪ್ರೇಮ ಕಥೆಯ ದೃಶ್ಯ ಕಾವ್ಯ “ಮನಸು ಮಲ್ಲಿಗೆ”.
ಪ್ರೀತಿ ಕುರುಡು, ನಿಷ್ಕಲ್ಮಶ ಪ್ರೀತಿ ಅಂಕುರಿಸಿದರೆ ಎದುರಾಗುವ ಪ್ರವಾಹದಂತಹ ಅಡೆತಡೆಗಳನ್ನು ತಡೆದು ನಿಲ್ಲಿಸುವ ಶಕ್ತಿ ಪ್ರೀತಿಗೆ ಇದೆ ಎನ್ನುವುದನ್ನು ಪ್ರಸ್ತುತ ಪಡಿಸಿರುವ ಚಿತ್ರ ಇದು.
ಮರಾಠಿಯಲ್ಲಿ ತೆರೆಗೆ ಬಂದು ಇಡೀ ಭಾರತೀಯ ಚಿತ್ರರಂಗವನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆದ “ಸೈರಾಟ್” ಚಿತ್ರವನ್ನು ನಿರ್ದೇಶಕ ಎಸ್.ನಾರಾಯಣ್ ಕನ್ನಡಕ್ಕೆ ತಂದಿದ್ದಾರೆ. ಆ ಮೂಲಕ ಭಾಷೆ ಯಾವುದಾದರೆ ಏನು ? ಪ್ರೀತಿಯ ಭಾವ ಒಂದೇ .ಮುದ್ದಿಸುವ ಮನಸ್ಸುಗಳು ಒಂದೆ ಎನ್ನುವುದಕ್ಕೊಂದು ತಾಜಾ ನಿದರ್ಶನ ಈ ಚಿತ್ರ.
ಪ್ರೀತಿಸುವರಿಗೆ,ಪೋಷಕರಿಗೆ ಸಂದೇಶ ನೀಡುವ ಪ್ರಯತ್ನದ ’ಮನಸು ಮಲ್ಲಿಗೆ’ಯದು. ಚಿತ್ರ ಮೆಲ್ಲಗೆ ಮನಸ್ಸುಗಳನ್ನು ಕಥೆಯೊಳೆಗೆ ತನ್ನತ್ತ ಸೆಳೆದುಕೊಳ್ಳುತ್ತದೆ. ಯುವ ಜೋಡಿಗಳ ತುಂಟತನ, ಪ್ರೀತಿ ಪ್ರೇಮ, ಮನೆಯವರನ್ನು ಎದುರು ಹಾಕಿಕೊಂಡು ಊರೂರು ಅಲೆದಾಟ, ಪಡುವಪಾಟು, ಕಷ್ಟ ಕೋಟಲೆ ಪ್ರೇಮಿಗಳ ವಾಸ್ತವ ಬದುಕಿಗೆ ಹತ್ತಿರವಾಗಿದೆ .ಜೊತೆಗೆ ಮನೆಯವರನ್ನು ಎದುರು ಹಾಕಿಕೊಂಡರೆ ಏನೆಲ್ಲಾ ಆವಾಂತರಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಪಾಠದಂತೆಯೂ ಇದೆ.
ಶ್ರೀಮಂತ ಮನೆತನದ ಹುಡುಗಿ ಸಂಜು ಅಲಿಯಾಸ್ ಸಂಜನಾ ಪಾಟೀಲ್ (ರಿಂಕು ರಾಜ್ ಗುರು) ಗಟ್ಟಿಗಿತ್ತಿ ಹೆಣ್ಣುಮಗಳು. ಒಂದು ರೀತಿಯಲ್ಲಿ ಗಂಡು ಹುಡುಗನ ಸ್ವಭಾವ. ಬುಲ್ಲೆಟ್ ಓಡಿಸುವುದು ಕುದುರೆ ಸವಾರಿ ಆಕೆಯ ಇಷ್ಟದ ಹವ್ಯಾಸ.ಇಂತಹ ಹುಡುಗಿಯನ್ನು ಬಡತನದ ಬೇಗೆಯಲ್ಲಿ ಬದುಕು ಸಾಗಿಸುವ ಕುಟುಂಬದ ಹುಡುಗ ಪರುಶು ಅಲಿಯಾಸ್ ಪರುಶುರಾಮ್ (ನಿಶಾಂತ್) ಪ್ರೀತಿಸುತ್ತಾನೆ. ಹೇಳಿ ಕೇಳಿ ಶಾಸಕರ ಮಗಳು ಈತನ ಆಸೆ ಈಡೇರುತ್ತಾ ಎನ್ನುವ ವೇಳೆಗೆ ತುಪ್ಪ ಜಾರಿ ರೊಟ್ಟಿಯ ಮೇಲೆ ಬೀಳುತ್ತದೆ.
ಇಬ್ಬರ ಪ್ರೀತಿ ಪ್ರೇಮ ಮನೆಯವರಿಗೆ ಗೊತ್ತಾಗಿ ಹುಡುಗಿಗೆ ಮದುವೆ ನಿಶ್ಚಿತಾರ್ಥ ನಡೆದ ವೇಳೆಯೇ ಮನೆ ಬಿಟ್ಟು ಪರಶು ಜೊತೆ ಊರು ಬಿಡಲು ನಿರ್ಧರಿಸುತ್ತಾಳೆ. ಇದು ಆಕೆಯ ತಂದೆಗೆ ಕಡುಕೋಪ ತರಿಸುತ್ತದೆ. ಎದುರಾಗುವ ಅಡೆತಡೆ ದಾಟಿ ಬದುಕು ಕಟ್ಟಿಕೊಳ್ಳುವ ಯುವ ಜೋಡಿ ಹೋದ ಕಡೆಯಲ್ಲಾದರೂ ಹಾಯಾಗಿ ಇರುತ್ತಾರಾ? ಅಲ್ಲಿ ಇನ್ನೇನು ರಾದ್ದಾಂತಗಳಾಗಲಿವೆ. ಎನ್ನುವುದು ಕಥನ ಕುತೂಹಲ. ಚಿತ್ರದ ಕ್ಲೈಮಾಕ್ಸ್ ನಿರೀಕ್ಷೆಗೂ ಮೀರಿದ ರೋಚಕೆತೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು.
ಚಿತ್ರದ ಮೂಲಕ ಹಿರಿಯ ನಿರ್ದೇಶಕ ಎಸ್ .ನಾರಾಯಣ್, ಬಹಳ ದಿನಗಳ ನಂತರ ಮನ ಮಿಡಿಯುವ ಕಥೆಯನ್ನು ಚಿತ್ರ ರೂಪಕವಾಗಿ ಕಟ್ಟಿಕೊಟ್ಟಿದ್ದಾರೆ. ಸ್ಟಾರ್ ಗಳಿದ್ದರಷ್ಟೇ ಚಿತ್ರ ಎನ್ನುವ ಗಾಂಧಿನಗರದ ಸಿದ್ಧ ಸೂತ್ರಗಳಿಗೆ ಒಳ್ಳೆಯ ಕಥೆ ಸಿಕ್ಕರೆ ಸ್ಟಾರ್ ಗಳನ್ನೂ ಸೃಷ್ಟಿಸಬಹುದು ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಜೊತೆಗೆ ಮೂಲ ಚಿತ್ರವನ್ನು ಸಾಧ್ಯವಾದಷ್ಟು ಭಟ್ಟಿ ಇಳಿಸುವ ಕೆಲಸ ಮಾಡುವುದನ್ನು ಮರೆತಿಲ್ಲ.
ಚೊಚ್ಚಲ ಬಾರಿಗೆ ಕಾಣಿಸಿಕೊಂಡಿರುವ ನಾಯಕ ನಿಶಾಂತ್ ಮುಗ್ದತೆಯಿಂದಲೇ ಗಮನ ಸೆಳಿದಿದ್ದಾರೆ. ಒಂದಷ್ಟು ತಯಾರಿ ಮಾಡಿಕೊಂಡರೆ ಭರವಸೆಯ ನಟನಾಗಬಲ್ಲ. ಮೂಲ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಿಂಕು ರಾಜ್‌ಗುರು ಇಲ್ಲಿಯೂ ತಮ್ಮ ಪಾತ್ರದ ಮೂಲಕ ಮೋಡಿ ಮಾಡಿದ್ದಾರೆ. ಒಂದು ರೀತಿ ಚಿತ್ರದಲ್ಲಿ ಅವರೇ ನಾಯಕ. ಮೂಲ ಚಿತ್ರಕ್ಕೆ ಸಂಗೀತ ನೀಡಿದ್ದ ಅಜಯ್-ಅತುಲ್ ಅವರೇ ಇಲ್ಲಿಯೂ ಸಂಗೀತ ನೀಡಿದ್ದು,ಹಾಡುಗಳು ಹಿಂಪಾಗಿವೆ, ಜೊತೆಗೆ ರೀರೇಕಾರ್ಡಿಂಗ್ ಕೂಡ ಮನಸ್ಸಿನ ನಾಟುತ್ತದೆ. ಮನೋಹರ್ ಜೋಷಿ ಮೊದಲರ್ಧದಲ್ಲಿ ಟಾಪ್ ಆಂಗಲ್ ನಲ್ಲಿ ನಿಸರ್ಗದ ದೃಶ್ಯ ಸೊಬಗನ್ನು ಸೆರೆ ಹಿಡಿದಿದ್ದಾರೆ. ಅರವಿಂದ್ ರಾವ್. ಪದ್ಮ ಮುಖ್ಯಮಂತ್ರಿ ಚಂದ್ರ ಸೇರಿದಂತೆ ಇತರೆ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
-ಚಿಕ್ಕನೆಟಕುಂಟೆ ಜಿ.ರಮೇಶ್

Leave a Comment