ಮಧ್ಯಪ್ರದೇಶ ವಶಕ್ಕೆ ಬಿಜೆಪಿ ಕನ್ನ: ಕೈಕೊಟ್ಟ 12 ಶಾಸಕರು ಅತಂತ್ರ ಸ್ಥಿತಿಯಲ್ಲಿ ಕಮಲನಾಥ್ ಸರ್ಕಾರ

ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ಶಾಸಕರು ಮೊಕ್ಕಾಂ
ನವದೆಹಲಿ/ಬೆಂಗಳೂರು, ಮಾ. ೪- ಮಧ್ಯಪ್ರದೇಶದಲ್ಲಿ ತಡರಾತ್ರಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಂದಾಗಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸಕ್ರಾರ ಅತಂತ್ರ ಸ್ಥಿತಿಗೆ ತಲುಪಿದೆ. ಕರ್ನಾಟಕದ ಮಾದರಿಯಲ್ಲೇ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಆಪರೇಷನ್ ಕಮಲದ ಕಾರ್ಯಾಚರಣೆಗೆ ಬಿಜೆಪಿ ಮುಂದಾಗಿದೆ.

  •  ಅತಂತ್ರ ಸ್ಥಿತಿಯಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ.
  •  ತಡರಾತ್ರಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆ.
  •  ಕರ್ನಾಟಕದ ಮಾದರಿಯಲ್ಲಿ ಆಪರೇಷನ್ ಕಮಲಕ್ಕೆ ಮುಂದಾದ ಬಿಜೆಪಿ ನಾಯಕರು.
  •  8 ಮಂದಿ ಕಾಂಗ್ರೆಸ್ ಶಾಸಕರಿಗೆ ದೆಹಲಿಯ ಹೊಟೇಲ್‌ನಲ್ಲಿ ವಾಸ್ತವ್ಯ.
  •  ನಾಲ್ಕು ಮಂದಿ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ದು ಚಿಕ್ಕಮಗಳೂರಿಗೆ ಸ್ಥಳಾಂತರ.
  •  ತಮ್ಮ ಸರ್ಕಾರ ಸುಭದ್ರ ಎಂದು ಕಮಲ್ ನಾಥ್ ಪ್ರತಿಪಾದನೆ.

ಆಡಳಿತ ಪಕ್ಷದ 8 ಮಂದಿ ಶಾಸಕರನ್ನು ದೆಹಲಿಯ ಪಂಚತಾರಾ ಹೊಟೇಲ್‌ವೊಂದರಲ್ಲಿ ಕೂಡಿಹಾಕಿದ್ದರೆ, ಇನ್ನೂ ನಾಲ್ಕು ಮಂದಿ ಶಾಸಕರನ್ನು ಕರ್ನಾಟಕಕ್ಕೆ ವಿಶೇಷವಾಗಿ ಚಿಕ್ಕಮಗಳೂರಿನ ರೆಸಾರ್ಟ್‌ವೊಂದಕ್ಕೆ ಕರೆದೊಯ್ಯಲಾಗಿದೆ. ನಿನ್ನೆ ತಡ‌ರಾತ್ರಿ ನಾಲ್ವರು ಶಾಸಕರನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆತಂದು ಚಿಕ್ಕಮಗಳೂರಿನ ರೆಸಾರ್ಟ್‌ವೊಂದಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಲಾಗಿದ್ದು, ರಾಜ್ಯದ ಉಪಮುಖ್ಯಮಂತ್ರಿಯೊಬ್ಬರು, ಈ ಶಾಸಕರ ಕಾಪಿಟ್ಟುಕೊಳ್ಳುವಲ್ಲಿ ಉಸ್ತುವಾರಿ ವಹಿಸಿದ್ದಾರೆ ಎಂದು ಹೇಳಲಾಗಿದೆ.

ಹರಿಯಾಣದ ಗುರುಗ್ರಾಮದಲ್ಲಿರುವ ಐಟಿಸಿ ಮೌರ್ಯ ಪಂಚತಾರಾ ಹೊಟೇಲ್‌ನಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ನಾಯಕರು ಬಲವಂತವಾಗಿ ಹಿಡಿದಿಟ್ಟುಕೊಂಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್, ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷದ ಶಾಸಕರನ್ನು ದೆಹಲಿಗೆ ಕರೆದೊಯ್ಯುವ ಪ್ರಕ್ರಿಯೆಯಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡರಾದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಸಚಿವರಾದ ನರೋತ್ತಮ ಮಿಶ್ರ, ಭೂಪೇಂದ್ರ ಸಿಂಗ್ ಮತ್ತು ರಾಮ್ ಪಾಲ್ ಸಿಂಗ್ ಸೇರಿದಂತೆ, ಹಲವರು ಕಾಂಗ್ರೆಸ್‌ನ 8 ಮಂದಿ ಶಾಸಕರನ್ನು ಹೊಟೇಲ್‌ಗೆ ಕರೆದೊಯ್ಯಲಾಗಿದೆ ಎಂದು ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಜೀತು ಕೊತ್ವಾರಿ ಆರೋಪಿಸಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಕಮಲ್ ನಾಥ್ ತಮ್ಮ ಸರ್ಕಾರದ ಸ್ಥಿರತೆಗೆ ಯಾವುದೇ ರೀತಿ ಬೆದರಿಕೆ ಇಲ್ಲ. ಬಿಜೆಪಿ ಶಾಸಕರು ಕರೆದೊಯ್ದಿರುವ ನಮ್ಮ ಶಾಸಕರು ವಾಪಸ್ ಬರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ತಮ್ಮ ಸಂಪೂರ್ಣ ಸಹಮತವಿದೆ. ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿರುವ ಹಗರಣಗಳನ್ನು ಬಯಲಿಗೆಳೆಯುತ್ತೇನೆ ಎಂಬ ಭಯದಿಂದ ಬಿಜೆಪಿ ನಾಯಕರು ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಕುದುರೆ ವ್ಯಾಪಾರದ ಮೂಲಕ ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ. ಒಬ್ಬೊಬ್ಬ ಶಾಸಕರಿಗೆ 25 ರಿಂದ 35 ಕೋಟಿ ರೂ. ಆಮಿಷ ಒಡ್ಡಲಾಗುತ್ತಿದೆ ಎಂದು ದಿಗ್ವಿಜಯ್ ಸಿಂಗ್ ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ವೈಜೇಶ್ ಲೂನಾವತ್, ಶಾಸಕರಿಗೆ ನಾವು ಯಾವುದೇ ರೀತಿಯ ಆಮಿಷ ಒಡ್ಡಿಲ್ಲ, ಆಪರೇಷನ್ ಕಮಲದಂತಹ ಕಾರ್ಯಾಚರಣೆಗೂ ಕೈಹಾಕಿಲ್ಲ ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆ ಒಟ್ಟು 230 ಸದಸ್ಯಬಲ ಹೊಂದಿದ್ದು, 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ – 114, ಬಿಜೆಪಿ – 109, ಪಕ್ಷೇತರ – 1, ಬಿಎಸ್‌ಪಿ – 2, ಎಸ್‌ಪಿ – 2 ಕ್ಷೇತ್ರಗಳಲ್ಲಿ ಜಯಗಳಿಸಿದೆ.

ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ, ಬಿಜೆಪಿ ಅಧಿಕಾರದ ಸೂತ್ರ ಹಿಡಿಯಲು ಪ್ರಯತ್ನಿಸಿತ್ತಾದರೂ, ನಿರೀಕ್ಷಿತ ಶಾಸಕರ ಬೆಂಬಲ ದೊರೆಯದೆ, ಆ ಪ್ರಯತ್ನವನ್ನು ಕೈಬಿಟ್ಟಿತ್ತು.

ಈ ಮಧ್ಯೆ, ಹರಿಯಾಣ ಹೊಟೇಲ್ ನಿಂದ 8 ಮಂದಿ ಶಾಸಕರ ಪೈಕಿ ನಾಲ್ವರು ವಾಪಸ್ ಬಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

ಬಿಜೆಪಿ ನಾಯಕರು ಕರೆದುಕೊಂಡುಹೋಗಿರುವ ಎಂಟೂ ಜನ ಶಾಸಕರನ್ನು ವಾಪಸ್ ಕರೆತರುವ ಪ್ರಯತ್ನದಲ್ಲಿ ನಿರತರಾಗಿದ್ದೇವೆ. ಈಗಾಗಲೇ ನಾಲ್ವರನ್ನು ಹಿಂದಕ್ಕೆ ಕರೆಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ. ಆದರೆ ಗುಡ್ಡಗಾಡು ಪ್ರದೇಶದ ಶಾಸಕ ಬಿಷಹುಲಾಲ್ ಸಿಂಗ್ ಅವರನ್ನು ಬಲವಂತವಾಗಿ ಅಡಗಿಸಿಡಲಾಗಿದೆ ಎಂದೂ ಅವರು ಆಪಾದಿಸಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ ಬಿಜೆಪಿ ವಶದಲ್ಲಿ ಇರುವ ಶಾಸಕರನ್ನು ಭೇಟಿಮಾಡುವ ಸಲುವಾಗಿ ದಿಗ್ವಿಜಯ್ ಸಿಂಗ್ ಹಾಗೂ ಅವರ ಪುತ್ರ, ಮಂತ್ರಿ, ಜೈವರ್ಧನ್ ಸಿಂಗ್ ಇವರೊಂದಿಗೆ ಸಂಬಂಧಿಸಿದ ಹೊಟೇಲ್‌ಗೆ ಧಾವಿಸಿದ್ದಾರೆ.
ಅಂತಹದ್ದೇನಿಲ್ಲ
ಆದರೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಮಾತ್ರ ‘ಅಂತಹದ್ದೇನೂ ಇಲ್ಲ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದು, ಹೋಗಿರುವ ಶಾಸಕರೆಲ್ಲರೂ ಹಿಂತಿರುಗಿ ಬರಲಿದ್ದಾರೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Leave a Comment