ಮಧ್ಯಂತರ ಚುನಾವಣೆ ಸಿದ್ದು ಭವಿಷ್ಯ: ಡಿಸೆಂಬರ್‌ನಲ್ಲಿ ಸಾಧ್ಯತೆ, ಸಜ್ಜಾಗಿರುವಂತೆ ಕಾರ್ಯಕರ್ತರಿಗೆ ಸೂಚನೆ

ಮೈಸೂರು, ಸೆ. ೧- ರಾಜ್ಯ ವಿಧಾನಸಭೆಗೆ ಬರುವ ಡಿಸೆಂಬರ್‌ನಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಪಕ್ಷ ಈಗಿನಿಂದಲೇ ಎದುರಾಗಬಹುದಾದ ಮಧ್ಯಂತರ ಚುನಾವಣೆಗೆ ತಯಾರಾಗುತ್ತಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಮುಂದಿನ 3 ತಿಂಗಳಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗಬಹುದಾಗಿದ್ದು, ಇದಕ್ಕೆ ಸಿದ್ಧರಾಗುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ನಿನ್ನೆ ಭೇಟಿ ಮಾಡಿದ್ದ ಸಂದರ್ಭದಲ್ಲೂ ಇದೇ ಸಲಹೆಯನ್ನು ಕಾರ್ಯಕರ್ತರಿಗೆ ನೀಡಿರುವುದಾಗಿ ತಿಳಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೆಚ್ಚುದಿನ ಅಧಿಕಾರದಲ್ಲಿರುತ್ತದೆ ಎಂದು ತಮಗನಿಸುವುದಿಲ್ಲ. ಯಾವುದೇ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಎದುರಾಗಬಹುದೆಂದು ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರೊಬ್ಬರೇ 1 ತಿಂಗಳ ಕಾಲ ಏಕವ್ಯಕ್ತಿ ಸರ್ಕಾರ ನಡೆಸಿದರು. ಅದಾದ ನಂತರ 17 ಮಂದಿಯನ್ನು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಈ ಸರ್ಕಾರ ಇನ್ನು ಟೇಕಾಫ್ ಆಗಿಲ್ಲ. ಹಾಲು ಕುಡಿದ ಮಕ್ಕಳೇ ಹೆಚ್ಚು ದಿನ ಬದುಕುವುದಿಲ್ಲ, ವಿಷ ಕುಡಿದ ಮಕ್ಕಳು ಇನ್ನೆಷ್ಟು ದಿನ ಬದುಕಲು ಸಾಧ್ಯ ಎಂದು ಅವರು ಮಾರ್ಮಿಕವಾಗಿ ನುಡಿದರು.

ಡಿಕೆಶಿ ವಿರುದ್ಧ ರಾಜಕೀಯ ಸೇಡು
ಮಾಜಿ ಡಿ.ಕೆ ಶಿವಕುಮಾರ್, ಅವರ ವಿರುದ್ಧ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ರಾಜಕೀಯ ಸೇಡು ತೀರಿಸಿಕೊಳ್ಳಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅವರಲ್ಲದೆ ಪ್ರತಿಪಕ್ಷ ನಾಯಕರು ವಿಶೇಷವಾಗಿ ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಟ್ಟುಕೊಂಡು ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದಂತಹ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಸಕ ಶ್ರೀನಿವಾಸಗೌಡ, ಬಿಜೆಪಿ ಮುಖಂಡರಾದ ಎಸ್.ಆರ್ ವಿಶ್ವನಾಥ್, ಡಾ. ಅಶ್ವತ್ಥನಾರಾಯಣ ಮತ್ತು ಸಿ.ಪಿ. ಯೋಗೇಶ್ವರ್ ತಮಗೆ 5 ಕೋಟಿ ರೂ. ಆಮಿಷವೊಡ್ಡಿ ಆಪರೇಷನ್ ಕಮಲದ ಖೆಡ್ಡಾಕ್ಕೆ ಬೀಳಿಸಲು ಯತ್ನಿಸಿದ್ದರೆಂದೂ ಬಹಿರಂಗವಾಗಿ ಆರೋಪಿಸಿದರು. ಆದರೆ, ಶಿವಕುಮಾರ್ ಅವರ ವಿರುದ್ಧ ತನಿಖೆ ನಡೆಸುವ ಬಿಜೆಪಿ ನಾಯಕರು, ಆಪರೇಷನ್ ಕಮಲದ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ. ಕಾನೂನು ಎಲ್ಲರಿಗೂ ಒಂದೇ ಅಲ್ಲವೆ ಎಂದು ಪ್ರಶ್ನಿಸಿದರು.

ನಂಬಿದವರೇ ಕೈ ಕೊಟ್ಟರು
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಬೆಂಬಲ ಪಡೆದು ಆಯ್ಕೆಯಾದ ಶಾಸಕರೇ ಈಗ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಮಾಜಿ ಎಂ.ಟಿ.ಬಿ ನಾಗರಾಜ್ ಮತ್ತಿತರರ ವಿರುದ್ಧ ಹರಿಹಾಯ್ದರು.

ತಮ್ಮ ಹೃದಯದಲ್ಲಿ ಮನೆ ಮಾಡಿದ್ದಾರೆ ಎಂದು ಹೇಳಿದ್ದ ಎಂ.ಟಿ.ಬಿ ನಾಗರಾಜ್, ಇದೀಗ ಟೀಕೆ ಮಾಡಲು ಹೊರಟಿದ್ದಾರೆ. ಅವರ ಟೀಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನನ್ನ ಜತೆಯಲ್ಲಿದ್ದುಕೊಂ‌ಡೇ ದ್ರೋಹ ಬಗೆದವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದಿಂದ ಲಕ್ಷಾಂತರ ಜನ ಮನೆ-ಮಠ ಕಳೆದುಕೊಂಡು ಬೀದಿಗಿಳಿದಿದ್ದಾರೆ. ಪ್ರವಾಹ ಸಂತ್ರಸ್ಥರಿಗೆ 10 ಸಾವಿರ ರೂ. ಪರಿಹಾರ ಕೊಟ್ಟರೆ ಅದರಿಂದ ಅವರಿಗೆ ಏನು ಪ್ರಯೋಜನವಾಗುವುದಿಲ್ಲ. ಕನಿಷ್ಠ ಪಕ್ಷ 1 ಲಕ್ಷ ರೂ.ಗಳನ್ನಾದರೂ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

Leave a Comment