ಮಧ್ಯಂತರ ಚುನಾವಣೆ ನಿರಾಕರಣೆ

ಬೆಂಗಳೂರು, ಸೆ. ೨೦- ರಾಜ್ಯದಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಳ್ಳಿ ಹಾಕಿದ್ದಾರೆ.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಬಿಜೆಪಿ ಸರ್ಕಾರ ಅವಧಿ ಪೂರೈಸಿದ ನಂತರವೇ 4 ವರ್ಷಗಳ ಬಳಿಕ ಚುನಾವಣೆ ನಡೆಯುತ್ತದೆ. ಆಗಲೂ ಬಿಜೆಪಿಯೇ ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಅವರು ಭವಿಷ್ಯ ನುಡಿದರು.

ಮಧ್ಯಂತರ ಚುನಾವಣೆ ಬಗ್ಗೆ ಭವಿಷ್ಯ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಶ್ರೀಗಳ ಬಗ್ಗೆ ನಮಗೆ ಗೌರವವಿದೆ. ಅವರು ಹೇಳಿದಂತೆ ಯಾವಾಗ ಚುನಾವಣೆ ನಡೆದರೂ ಬಿಜೆಪಿಯೇ ಅಧಿಕಾರ ಹಿಡಿಯುವುದು ಎಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗ ಮಾತನಾಡುತ್ತ ಹೇಳಿದರು.

ಅನರ್ಹ ಶಾಸಕರಿಗೆ , ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ. ಸಭಾಧ್ಯಕ್ಷ ರಮೇಶ್ ಕುಮಾರ್ ಅನರ್ಹ ಶಾಸಕರಿಗೆ ಮಾಡಿರುವ ಅನ್ಯಾಯವನ್ನು ನ್ಯಾಯಾಲಯ ಸರಿಪಡಿಸುವ ವಿಶ್ವಾಸ ತಮಗಿದೆ ಎಂದರು.

ಈ ಹಿಂದ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್, ಸುಪ್ರೀಂಕೋರ್ಟ್‌ನ ನಿರ್ದೇಶನವನ್ನೇ ತಿರುಚಿ 17 ಶಾಸಕರನ್ನು ಅನರ್ಹಗೊಳಿಸಿದರು. ರಮೇಶ್ ಕುಮಾರ್ ಅವರು ಅಂಬೇಡ್ಕರ್ ಬಿಟ್ಟರೆ ತಾವೇ ಸಂವಿಧಾನದ ಬಗ್ಗೆ ತಿಳಿದುಕೊಂಡಿರುವುದು ಎಂಬ ಭಾವನೆ ಹೊಂದಿದ್ದಾರೆಂದು ವ್ಯಂಗ್ಯವಾಡಿದರು.

ಶಾಸಕರನ್ನು ಅನರ್ಹಗೊಳಿಸುವ ವಿಚಾರದಲ್ಲಿ ಸಿದ್ದರಾಮಯ್ಯನವರ ಕೈವಾಡವು ಇದೆ. ಸಿದ್ದರಾಮಯ್ಯ ಮತ್ತು ಸಭಾಧ್ಯಕ್ಷ ರಮೇಶ್ ಕುಮಾರ್ ಪರಸ್ಪರ ಹೊಗಳಿಕೊಂಡು ಸುಪ್ರೀಂಕೋರ್ಟ್ ನಿರ್ದೇಶನವನ್ನೇ ವ್ಯತಿರಿಕ್ತಗೊಳಿಸಿದರು ಎಂದು ಅವರು ಟೀಕಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ತಾವೇ ದೇವರಾಜ ಅರಸ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸ್ವಾಗತ
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆ ಜಿಲ್ಲೆ ರಚನೆ ಮಾಡುವ ಕ್ರಮ ಸ್ವಾಗತಾರ್ಹ ಎಂದರು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಬಳ್ಳಾರಿ ಅಭಿವೃದ್ಧಿಯಾಗಿದನ್ನು ಬಿಟ್ಟರೆ ಬಳ್ಳಾರಿ ಯಾವ ರೀತಿಯಲ್ಲೂ ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ವಿಭಜನೆ ಒಳ್ಳೆಯದು ಎಂದರು.

Leave a Comment