ಮಧುಮೇಹ ನಿಯಂತ್ರಿಸುವಲ್ಲಿ ಮನೆಮದ್ದುಗಳೂ ಫಲಪ್ರದ

ಮಧುಮೇಹ ಅಥವಾ ಡಯಾಬಿಟಿಸ್ ಎನ್ನುವುದು ಸದ್ದಿಲ್ಲದೆ ಕೊಲ್ಲುವ ರೋಗವೆಂದೇ ಜನಜನಿತವಾಗುತ್ತದೆ. ಈ ರೋಗ ನಿಯಂತ್ರಣ ಕುರಿತು ಗಮನ ಹರಿಸದಿದ್ದರೆ, ಜೀವಕ್ಕೆ ಕುತ್ತು ಎನ್ನುವುದೂ ಸ್ಪಷ್ಟ.
ದೇಹದಲ್ಲಿ ಇನ್ಸುಲಿನ್ ಮಟ್ಟದಲ್ಲಿ ಏರುಪೇರು ಆದಾಗ ಅಥವಾ ಇನ್ಸುಲಿನ್ ಅನ್ನು ಬಳಸಿಕೊಳ್ಳಲು ದೇಹ ವಿಫಲವಾದಾಗ, ಡಯಾಬಿಟಿಸ್ ರೋಗ ಕಾಡಲಾರಂಭಿಸುತ್ತದೆ.
ದೇಹದ ರಕ್ತದಲ್ಲಿ ಸಕ್ಕರೆ ಅಂಶ ಅಧಿಕಗೊಳ್ಳುವುದು, ದೇಹದ ತೂಕ ಕಡಿಮೆಯಾಗುವುದು, ಅತಿಯಾಗಿ ಮೂತ್ರ ವಿಸರ್ಜನೆ, ಕಣ್ಣಿನ ದೃಷ್ಟಿ ಮಂಕಾಗುವುದು, ಮುಂತಾದವು ಈ ರೋಗದ ಲಕ್ಷಣಗಳಾಗಿರುತ್ತವೆಂದು ವೈದ್ಯಲೋಕ ಹೇಳುತ್ತದೆ.
ಮಧುಮೇಹ ಇದೆ ಎಂಬುದನ್ನು ವೈದ್ಯರು ಖಚಿತಪಡಿಸಿದ ನಂತರ ಅದು ಹೆಚ್ಚಾಗದಂತೆ ಎಚ್ಚರ ವಹಿಸಲೇಬೇಕಾಗುತ್ತದೆ. ನಾವು ಸೇವಿಸುವ ಆಹಾರ ಪದಾರ್ಥಗಳಿಂದ ಸೇರಿ ಪ್ರತಿಯೊಂದು ವಿಚಾರದಲ್ಲೂ ಎಚ್ಚರದಿಂದ ಇರಬೇಕಾಗುತ್ತದೆ.
ಮಧುಮೇಹವನ್ನು ಮನೆಮದ್ದುಗಳ ಸೇವನೆಯಿಂದಲೂ ನಿಯಂತ್ರಣದಲ್ಲಿಡಬಹುದಾಗಿದೆ. ಉದಾಹರಣೆಗೆ ಬೀಟ್‌ರೂಟ್‌ನಲ್ಲೂ ಹೇರಳವಾಗಿ ಪೊಟಾಷಿಯಂ ಹಾಗೂ ವಿಟಮಿನ್ ಸಿ ಇದ್ದು, ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.
ಬೀಟ್‌ರೂಟ್ ಸೇವನೆಯಿಂದ ದೇಹದ ಶಕ್ತಿ ವೃದ್ಧಿಯಾಗಿ, ನಿಶ್ಯಕ್ತಿಯನ್ನು ನಿವಾರಣೆ ಮಾಡಬಲ್ಲದು.
ಇನ್ನು ಹಾಗಲಕಾಯಿ, ಇದು ಕಹಿಯಾದರೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡಲಿದ್ದು, ಮಧುಮೇಹಿಗಳ ಆರೋಗ್ಯ ರಕ್ಷಣೆಗೆ ಬರಲಿದೆ.
ಗೆಣಸು ಕೂಡ ಮಧುಮೇಹಿಗಳು ಸೇವಿಸಬಹುದಾದ ಒಂದು ತರಕಾರಿಯಾಗಿದ್ದು, ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ಸ್ವಾಭಾವಿಕವಾಗಿ ತಗ್ಗಿಸಲು ನೆರವಾಗುತ್ತದೆ. ಒಂದು ರೀತಿಯಲ್ಲಿ ಸಿಹಿಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ ಎಂದರೂ ತಪ್ಪಾಗಲಾರದು.
ಇನ್ನು ಬೆಂಡೆಕಾಯಿ, ಇದೂ ಕೂಡ ಮಧುಮೇಹಿಗಳಿಗೆ ಉಪಕಾರಿಯಾಗಿದೆ. ಬೆಂಡೆಕಾಯಿ ಸೇವನೆಯಿಂದ ರಕ್ತದ ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಡುವ ನಿಟ್ಟಿನಲ್ಲಿ ನೆರವಾಗಲಿದೆ. ಬೆಂಡೆಕಾಯಿ ನೆನೆಸಿಟ್ಟ ನೀರು ಕುಡಿಯುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗಲಿದೆ.
ದುಬಾರಿಯಲ್ಲದ ತರಕಾರಿ ಪಟ್ಟಿಯಲ್ಲಿರುವ ಎಲೆಕೋಸು ತಿನ್ನುವುದರಿಂದ ಇನ್ಸುಲಿನ್ ಮಟ್ಟವನ್ನು ನಿಯಂತ್ರಣ ಮಾಡಲಿದೆಯಂತೆ. ಮಾತ್ರವಲ್ಲದೆ, ದೇಹದ ತೂಕ ಇಳಿಸಿಕೊಳ್ಳಲೂ ಸಹಕಾರಿ.
ಹೂಕೋಸು ಸಹ ಮಧುಮೇಹಿಗಳು ಸೇವಿಸಬಹುದಾದ ತರಕಾರಿಯಾಗಿದ್ದು, ಇದರಲ್ಲಿರುವ ನಾರಿನಾಂಶ, ದೇಹದಲ್ಲಿರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕುವ ಸಾಮರ್ಥ್ಯ ಹೊಂದಿದೆ.
ಹೀಗೆ ಮಧುಮೇಹಿಗಳು, ಮನೆಗಳಲ್ಲಿ ಸುಲಭವಾಗಿ ದೊರೆಯುವ ತರಕಾರಿಗಳನ್ನು ಸೇವಿಸಿ, ತಮ್ಮಲ್ಲಿನ ರೋಗವನ್ನು ನಿಯಂತ್ರಿಸಿಕೊಂಡು ನೆಮ್ಮದಿಯ ಬದುಕು ಸಾಗಿಸಬಹುದಾಗಿದೆ.

Leave a Comment