`ಮದ್ಯ ವ್ಯಸನದಿಂದ ಆರೋಗ್ಯ ಮೇಲೆ ದುಷ್ಪರಿಣಾಮ’

ಉಡುಪಿ, ಜ.೧೧- ಚಟದಿಂದ ಆರಂಭಗೊಂಡು ಕಾಯಿಲೆಯಾಗಿ ಪರಿವರ್ತನೆಯಾಗುವ ಮದ್ಯ ವ್ಯಸನದಿಂದ ಆರೋಗ್ಯ, ಆರ್ಥಿಕ, ಸಾಮಾಜಿಕ, ಕೌಟುಂಬಿಕ ಹಾಗೂ ಮಾನಸಿಕ ಪರಿಣಾಮಗಳು ಬೀರುತ್ತವೆ ಎಂದು ಮಣಿಪಾಲ ಕೆಎಂಸಿ ಮೆಡಿಸಿನ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎನ್. ಆರ್.ರಾವ್ ಹೇಳಿದ್ದಾರೆ.
ಮುಂಬೈನ ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆ ಹಾಗೂ ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್‌ಗಳ ಸಹಯೋಗದಲ್ಲಿ ದೊಡ್ಡಣಗುಡ್ಡೆಯ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಕಳೆದ ೧೦ ದಿನಗಳ ಕಾಲ ನಡೆದ ೨೬ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಸಮಾರೋಪದಲ್ಲಿ ಗುರುವಾರ ಮಾತನಾಡುತಿದ್ದರು. ಮದ್ಯವ್ಯಸನ ವ್ಯಕ್ತಿಯ ಶರೀರದ ಎಲ್ಲಾ ಅವಯವಗಳ ಮೇಲೂ ದುಷ್ಪರಿಣಾ ಬೀರುತ್ತದೆ. ಆತನಿಗೆ ಸಾಮಾಜಿಕ ಹಣೆಪಟ್ಟಿ ತಪ್ಪಿದ್ದಲ್ಲ. ನೀರು, ಗಾಳಿಯಂತೆ ಮದ್ಯ ಮನುಷ್ಯನಿಗೆ ಬದುಕಿನ ಅನಿವಾರ್ಯತೆ ಏನಲ್ಲ ಎಂದರು. ಭಾರತೀಯ ವೈದ್ಯಕೀಯ ಸಂಘದ ಉಡುಪಿ ಕರಾವಳಿ ಶಾಖೆ ಕಾರ್ಯದರ್ಶಿ ಡಾ.ಕೃಷ್ಣಾನಂದ ಮಲ್ಯ ಮಾತನಾಡಿ, ಸಾಮಾಜಿಕ ಕಳಕಳಿಯಿಂದ ರೂಪು ಗೊಂಡ ಮದ್ಯವ್ಯಸನ ವಿಮುಕ್ತಿ ಶಿಬಿರ, ವ್ಯಸನಿಗಳಿಗೆ ಹೊಸ ಬದುಕಿಗೆ ಹಾದಿ ತೆರೆದಿದೆ. ಮದ್ಯ ವ್ಯಸನಕ್ಕೀಡಾದವರು ಜೀವನ ಪಾಠ ಅರಿತು ಬದಲಾವಣೆಯ ಹಾದಿಯಲ್ಲಿ ಛಲದ ಮೊದಲ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ ಎಂದರು. ಮನೋರೋಗ ತಜ್ಞ ಡಾ.ವಿರೂಪಾಕ್ಷ ದೇವರಮನೆ ಮಾತನಾಡಿ, ಮದ್ಯ ವ್ಯಸನ ಮುಂದಿನ ಪೀಳಿಗೆಗೆ ಮಾರಕವಾಗದಂತೆ ಹೆತ್ತವರು ಎಚ್ಚರವಹಿಸಬೇಕು. ಮನೆಯಲ್ಲಿರುವ ಮಕ್ಕಳು ಮದ್ಯ ವ್ಯಸನಕ್ಕೆ ತುತ್ತಾಗುವ ಅಪಾಯ ಮೂರು ಪಟ್ಟು ಹೆಚ್ಚಿದೆ ಎಂದವರು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಮಾತನಾಡಿ, ಕುಡಿತ ಬಿಟ್ಟವರ ಬಗ್ಗೆ ತಕ್ಷಣದ ನಿರೀಕ್ಷೆ, ಸಂಶಯ ಸರಿಯಲ್ಲ. ಅವರೊಂದಿಗೆ ಸಮಾಧಾನದಿಂದ ವ್ಯವಹರಿಸಬೇಕು. ತಮಗೆ ಮಾತ್ರವಲ್ಲ ಅನ್ಯರಿಗೂ ಪ್ರಯೋಜನವಾಗುವಂತೆ ಕಲಿತ ವಿದ್ಯೆಯ ಸದ್ಭಳಕೆಯಾಗಬೇಕು ಎಂದರು. ಮನೋತಜ್ಞ ಡಾ. ದೀಪಕ್ ಮಲ್ಯ ಮಾತನಾಡಿದರು. ನವೀನ್ ಪೆರ್ಡೂರು, ವೆಂಕಟೇಶ್, ಶಂಕರ್ ನಾಯಕ್, ಸದಾನಂದ ಪೂಜಾರಿ, ನಾಗರಾಜ್, ವಾಸುದೇವ ಅಮಲು ರೋಗಕ್ಕೆ ಮತ್ತೆ ಬಲಿಯಾಗದಿರುವ, ಅನಾಮಿಕ ಅಮಲು ರೋಗಿಗಳ ಸಭೆಗೆ ತಪ್ಪದೇ ಬರುವ ಭರವಸೆ ನೀಡಿದರು.
ಶಿಬಿರಾರ್ಥಿಗಳಿಗೆ ನಡೆದ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೀಣಾ ಬಹುಮಾನಿತರ ಪಟ್ಟಿ ಓದಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಸ್ವಾಗತಿಸಿ, ಸಮುದಾಯ ಸಂಯೋಜಕ ಸುರೇಶ್ ಎಸ್. ನಾವೂರು ವರದಿ ವಾಚಿಸಿದರು. ಮೋನಿಕಾ ಮತ್ತು ಜಮೀಲಾ ಕಾರ್ಯಕ್ರಮ ನಿರೂಪಿಸಿದರು. ನರ್ಸಿಂಗ್ ಮೇಲ್ವಿಚಾರಕಿ ಎಡ್ನಾ ರೋಡ್ರಿಗಸ್ ವಂದಿಸಿದರು.

Leave a Comment