ಮದ್ಯದಂಗಡಿ ಮಾಲೀಕರು ಜನರನ್ನು ನಿಯಂತ್ರಿಲು ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು : ಭಾಸ್ಕರ್ ರಾವ್

ಬೆಂಗಳೂರು, ಮೇ.3 -ನಗರದಲ್ಲಿ ಬಿಬಿಎಂಪಿ ಘೋಷಿಸಿರುವ 22ನಿರ್ಬಂಧಿತ ವಲಯಗಳನ್ನು ಹೊರತು ಪಡಿಸಿ, ಉಳಿದೆಡೆ ಮದ್ಯದಂಗಡಿ, ಮಳಿಗೆಗಳನ್ನು ತೆರೆಯಬಹುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟ ಸಂದರ್ಭದಲ್ಲಿ ಗೊಂದಲ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಮದ್ಯ ಖರೀದಿ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಜನರನ್ನು ನಿಯಂತ್ರಣ ಮಾಡಲು ಮದ್ಯದಂಗಡಿ ಮಾಲೀಕರು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಪೊಲೀಸರು ಮದ್ಯದಂಗಡಿಗಳ ಸುತ್ತ ಮುತ್ತ ರೌಂಡ್ಸ್ ನಲ್ಲಿ ನಿರತರಾಗಿರುತ್ತಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟೆ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.

ಬೆಳಿಗ್ಗೆ 7ಗಂಟೆಯಿಂದ ರಾತ್ರಿ 7ಗಂಟೆವರೆಗೆ ಅಂಗಡಿ, ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇನ್ನು, ಅಬಕಾರಿ ಆದೇಶದನ್ವಯ ಸೋಮವಾರದಿಂದ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮದ್ಯ ಖರೀದಿಗೆ ಅವಕಾಶ ನೀಡಲಾಗಿದೆ. ಮದ್ಯದಂಗಡಿಗೆ ಬರುವವರು ಕಡ್ಡಾಯವಾಗಿ ಮುಖಗವಸು, ಕೈಗವಸು ಬಳಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

ಇನ್ನು, ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಬೆಳಿಗ್ಗೆ 7ರಿಂದ ಸಂಜೆ 6.30ರೊಳಗಾಗಿ ತೆಗೆದುಕೊಳ್ಳಬೇಕು. ಇದರಲ್ಲಿ ವೈದ್ಯಕೀಯ ಕ್ಷೇತ್ರ ಹಾಗೂ ‌ಇತರೆ ಅಗತ್ಯ ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದೆ. ಅನಗತ್ಯವಾಗಿ ಗುಂಪು ಸೇರುವುದು, ನಿಷೇಧಾಜ್ಞೆ ಉಲ್ಲಂಘಿಸಿದಲ್ಲಿ ಎನ್ ಡಿ ಎಂ ಎ ಕಾಯ್ದೆ ಅಡಿ ಕ್ರಮ ಜರುಗಿಸಲಾಗುವುದು. ರಾತ್ರಿ 7 ಗಂಟೆ ನಂತರ ನಿಷಾಧಾಜ್ಞೆ ಜಾರಿಯಲ್ಲಿರಲಿದೆ ಎಂದು ಹೇಳಿದರು.

ಅಲ್ಲದೇ, ಕಟ್ಟಡ ನಿರ್ಮಾಣ ಹಾಗೂ ಕೈಗಾರಿಕಾ ಕೆಲಸಗಳಲ್ಲಿ ಕಾರ್ಮಿಕರು ತೊಡಗಿಕೊಳ್ಳಬಹುದಾಗಿದೆ. ಕೊರೋನಾ ಸೋಂಕು ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ನಗರವನ್ನು ಕೆಂಪು ವಲಯ ಎಂದು ಗುರುತಿಸಿದ್ದರಿಂದ ಸುಖಾಸುಮ್ಮನೆ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗುವುದು. ಅಲ್ಲದೇ, ಚಾಲಕರು ಪ್ರತಿ ಗಂಟೆಗೆ 30ಕಿ ಮೀ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಬೇಕು ಎಂದು ತಾಕೀತು ಮಾಡಿದರು.

ಕಡ್ಡಾಯವಾಗಿ ಚಾಲಕರು ಸಂಚಾರ ನಿಯಮ ಪಾಲಿಸುವ ಜತೆಗೆ ಗುರುತಿನ ಚೀಟಿಯನ್ನು ಇಟ್ಟುಕೊಂಡಿರಬೇಕು. ಧಾರ್ಮಿಕ ಸಭೆ, ಸಮಾರಂಭ, ಪ್ರತಿಭಟನೆ ನಡೆಸಲು ಅವಕಾಶವಿರುವಿದಿಲ್ಲ ಎಂದರು.

Share

Leave a Comment