ಮದುವೆಯಾಗುವುದಾಗಿ ನಂಬಿಸಿ ರೂ. 1.3 ಕೋಟಿ ನಾಮ

ತುಮಕೂರು, ಅ. ೧೪- ಕಳೆದ 5 ವರ್ಷಗಳಿಂದ ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ ಹುಡುಗಿ, ಆಕೆಯ ಪೋಷಕರು ಮತ್ತು ಸಹೋದರ ತನ್ನಿಂದ 1.3 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಅಶೋಕ್‌ಕುಮಾರ್ ಎಂಬುವರು ಇಲ್ಲಿನ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಮದುವೆ ಹುಡುಗಿಯನ್ನು ನೋ‌ಡಿದರೂ ಹೊಂದಾಣಿಕೆಯಾಗದೆ ವಿಳಂಬವಾಗುತ್ತಿತ್ತು. ಸ್ನೇಹಿತರ ಸಲಹೆ ಮೇರೆಗೆ ಕನ್ನಡ ಮ್ಯಾಟ್ರಿ ಮೋನಿಯಲ್‌ನಲ್ಲಿ ನನ್ನ ವೈಯಕ್ತಿಕ ವಿವರ ಹಾಕಿದ್ದೆ. ಅಲ್ಲಿ ಪರಿಚಯವಾದ ಹುಡುಗಿ ಮದುವೆಯಾಗುವುದಾಗಿ ಒಪ್ಪಿದ್ದರು. ಪೋಷಕರೂ ಸಹ ಮದುವೆ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದ್ದರು.
ಬಳಿಕ ಅವರ ತಂದೆ ಸಿದ್ದೇಗೌಡ, ತಾಯಿ ರಾಧಾ, ಅಣ್ಣ ಸಂದೇಶ್ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಇದಾದ ಕೆಲ ದಿನಗಳ ನಂತರ ಹುಡುಗಿ ಮತ್ತು ಅವರ ಸಹೋದರ ಮತ್ತು ಪೋಷಕರು ತಮ್ಮ ಬ್ಯಾಂಕ್ ಖಾತೆಗೆ ಹಣ ಪಡೆದಿದ್ದರು ಎಂದು ಹೇಳಿದ್ದಾರೆ.
ಸಂದೇಶ್ ಬೆಂಗಳೂರಿನ ಜೀವನ್ ಬೀಮಾ ನಗರದಲ್ಲಿರುವ ಐಸಿಐಸಿಐ ಬ್ಯಾಂಕ್ ಖಾತೆಗೆ, ಆರ್ಟ್‌ ಆಫ್ ಲಿವಿಂಗ್ ಶಾಖೆಯ ಹುಡುಗಿ ಅವರ ಖಾತೆಗೆ, ಅದೇ ಬ್ಯಾಂಕ್‌ನಲ್ಲಿ ಹುಡಗಿಯ ತಾಯಿ ರಾಧಾ ಅವರ ಖಾತೆಗೆ, ಬೆಂಗಳೂರಿನ ಕೋಣನಕುಂಟೆ ಕೆನರಾಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಹುಡುಗಿಯ ತಂದೆ ಸಿದ್ದೇಗೌಡ ಅವರ ಖಾತೆಗೆ 2014 ರಿಂದ 2016ರ ವರೆಗೆ ಒಟ್ಟು 1.3 ಕೋಟಿ ರೂ. ಜಮಾ ಮಾಡಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮನೆ ಕಟ್ಟಿಸುತ್ತಿದ್ದು, ಮನೆ ನಿರ್ಮಾಣ ಪೂರ್ಣವಾದ ನಂತರ ಮದುವೆ ಮಾಡುವುದಾಗಿ ಹುಡುಗಿಯ ಪೋಷಕರು ಮತ್ತು ಸಹೋದರ ಹೇಳಿದ್ದರು. ತನ್ನಿದ ಪಡೆದ 1.3 ಕೋಟಿ ರೂ. ಹಣ ಕೊಡದೆ ಬೇರೆಯವರಿಗೆ ಹುಡಿಯನ್ನು ಮದುವೆ ಮಾಡಿಕೊಟ್ಟು ವಂಚಿಸಿದ್ದಾರೆ. ಇವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

Leave a Comment