ಮತ್ತೊಂದು ದಾಖಲೆ ಸನಿಹದಲ್ಲಿ ಹಿಟ್‌ಮ್ಯಾನ್ ರೋಹಿತ್

ನವದೆಹಲಿ, ಆ ೧೪- ವಿಶ್ವಕಪ್‌ನಲ್ಲಿ ಅನೇಕ ದಾಖಲೆಗಳನ್ನು ಉಡೀಸ್ ಮಾಡಿದ ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಅಂತಿಮ ಏಕದಿನ ಪಂದ್ಯದಲ್ಲಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸುವ ತವಕದಲ್ಲಿದ್ದಾರೆ.
ಅತ್ತ ಟೀಂ ಇಂಡಿಯಾ ಏಕದಿನ ಸರಣಿ ಕೈವಶ ಮಾಡಿಕೊಳ್ಳಲು ಸಿದ್ದತೆ ನಡೆಸಿದ್ದು, ಇತ್ತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಜೋಡಿ ಇಂದು ನಡೆಯುವ ಅಂತಿಮ ಏಕದಿನ ಪಂದ್ಯದಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆಯುಲು ಸಿದ್ದತೆ ನಡೆಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಕೇವಲ ೨೭ ರನ್ ಗಳಿಸಿದರೆ, ೧೦೦೦ ರನ್ ಜತೆಯಾಟವಾಗಲಿದೆ. ಆ ಮೂಲಕ ಕೆರಿಬಿಯನ್ ತಂಡದ ವಿರುದ್ಧ ಏಕದಿನ ಮಾದರಿಯಲ್ಲಿ ಸಾವಿರ ರನ್ ಜತೆಯಾಟವಾಡಿದ ವಿಶ್ವದ ಮೊದಲ ಜೋಡಿ ಎಂಬ ಸಾಧನೆಗೆ ಕೊಹ್ಲಿ-ರೋಹಿತ್ ಜೋಡಿ ಭಾಜನವಾಗಲಿದೆ. ರೋಹಿತ್ ಶರ್ಮಾ ಮತ್ತೊಂದು ವೈಯಕ್ತಿಕ ದಾಖಲೆಯ ಹೊಸ್ತಿಲಲ್ಲಿ ಇದ್ದಾರೆ.
ಇನ್ನೂ ೨೬ ರನ್ ಗಳಿಸಿದರೆ, ಮಾಜಿ ಬ್ಯಾಟ್ಸ್‌ಮ್ಯಾನ್ ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಳನೇ ಬ್ಯಾಟ್ಸ್‌ಮ್ಯಾನ್ ಆಗಲಿದ್ದಾರೆ. ಯುವರಾಜ್ ಸಿಂಗ್ ತಮ್ಮ ವೃತ್ತಿ ಜೀವನದಲ್ಲಿ ೮,೭೦೧ ರನ್ ಗಳಿಸಿದ್ದಾರೆ. ರೋಹಿತ್ ಸದ್ಯ ೮,೬೭೬ ರನ್ ಗಳಿಸಿದ್ದಾರೆ.
ಇದೇ ಪಂದ್ಯದಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ ಸದ್ಯ ೫೩ ಏಕದಿನ ಪಂದ್ಯಗಳಿಂದ ೯೬ ವಿಕೆಟ್ ಕಿತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದರೆ, ಏಕದಿನ ಮಾದರಿಯಲ್ಲಿ ಅತಿ ವೇಗವಾಗಿ ೧೦೦ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಆಗಲಿದ್ದಾರೆ. ಇದಕ್ಕೂ ಮುನ್ನ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರು ೫೬ ಪಂದ್ಯಗಳಿಂದ ೧೦೦ ವಿಕೆಟ್ ಪಡೆದು ಸಾಧನೆ ಮಾಡಿದ್ದರು.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ ೧-೦ ಮುನ್ನಡೆ ಪಡೆದಿದೆ. ಮೊದಲನೇ ಪಂದ್ಯ ಮಳೆಗೆ ರದ್ದಾಗಿದ್ದರೆ, ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಪಡೆದಿತ್ತು. ಇಂದು ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ಗೆದ್ದರೆ ಏಕದಿನ ಸರಣಿ ತನ್ನದಾಗಿಸಿಕೊಳ್ಳಲಿದೆ.

Leave a Comment