ಮತ್ತೆ 5 ತಿಂಗಳು ಶಿರಾಡಿಘಾಟ್ ರಸ್ತೆ ಬಂದ್

ಹೊಳೆನರಸೀಪುರ, ಆ. ೧೯- ಸತತ ಮಳೆ ಹಾಗೂ ಭೂಕುಸಿತದಿಂದ ಸಂಪೂರ್ಣವಾಗಿ ಹಾಳಾಗಿರುವ ಶಿರಾಡಿಘಾಟ್ ರಸ್ತೆ ದುರಸ್ಥಿಗಾಗಿ 5 ತಿಂಗಳ ಕಾಲ ಆ ಮಾರ್ಗದಲ್ಲಿ ಸಂಚಾರ ರದ್ದುಗೊಳಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.

ಶಿರಾಡಿಘಾಟ್ ರಸ್ತೆಗಳಲ್ಲಿ ಗುಡ್ಡ ಹಾಗೂ ಭೂಕುಸಿತದಿಂದ ಕಳೆದ ಕೆಲ ದಿನಗಳಿಂದಲೂ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಿತ್ತು. ಕಳೆದ ಕೆಲ ದಿನಗಳಿಂದಲೂ ಸತತವಾಗಿ ಬೀಳುತ್ತಿರುವ ಮಳೆಯಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಅಂದಾಜು 130ಕೋಟಿಗೂ ಅಧಿಕ ಹಣ ವ್ಯಯಿಸಿ ರಸ್ತೆ ದುರಸ್ಥಿಗೊಳಿಸಬೇಕಾಗಿದೆ ಎಂದು ರೇವಣ್ಣ ತಿಳಿಸಿದ್ದಾರೆ.

ಈ ಹಿನ್ನೆಲೆ ಶಿರಾಡಿಘಾಟ್ ರಸ್ತೆ ಸಂಚಾರವನ್ನು 5 ತಿಂಗಳ ಕಾಲ ಬಂದ್ ಮಾಡಲಾಗುವುದು. ಕೊಡಗು-ಮಡಿಕೇರಿ ರಸ್ತೆಗಳು ಸಹ ಸಂಪೂರ್ಣವಾಗಿ ಹಾಳಾಗಿದ್ದು, ಸುತ್ತಮುತ್ತಲಿನ ಗ್ರಾಮಗಳು ಮಳೆಯ ಆರ್ಭಟಕ್ಕೆ ಸಿಲುಕಿ ತೀವ್ರ ಆತಂಕ ಎದುರಿಸುತ್ತಿವೆ.

ಈ ಪ್ರದೇಶಗಳಲ್ಲಿನ ಜನರು ಸಂಕಷ್ಟದಲ್ಲಿದ್ದು, ರಸ್ತೆಗಳು ಸಹ ಹಾಳಾಗಿವೆ. ಈ ಎಲ್ಲ ರಸ್ತೆಗಳ ದುರಸ್ಥಿಗೆ ಕ್ರಮಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 169ರಲ್ಲೂ ಕುಸಿದ ಗುಡ್ಡ

ಕುದುರೆಮುಖ ರಾಷ್ಟ್ರೀಯ ಹೆದ್ದಾರಿ 169ರಲ್ಲೂ ಇಂದು ಬೆಳಿಗ್ಗೆ ದೊಡ್ಡ ದೊಡ್ಡ ಗುಡ್ಡಗಳು ಕುಸಿದು ಬಿದ್ದಿದ್ದು, ಸಂಚಾರ ತೀವ್ರ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ, ಕಳಸಾ ಭಾಗದಿಂದ ಕುದುರೆಮುಖಕ್ಕೆ ಆಗಮಿಸಿ ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕುದುರೆಮುಖ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಜೆಸಿಬಿ ಯಂತ್ರಗಳ ಮೂಲಕ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಇನ್ನುಳಿದಂತೆ ಚಾರ್ಮುಡಿಯಲ್ಲೂ ಭಾರಿ ಸಂಖ್ಯೆಯ ವಾಹನಗಳು ಸಂಚರಿಸುತ್ತಿದ್ದು, ಮಳೆ ಮುಂದುವರೆದಿರುವ ಕಾರಣ ಸಾವಿರಾರು ವಾಹನಗಳು ಶನಿವಾರ ರಾತ್ರಿಯಿಂದ ಭಾನುವಾರ ಬೆಳಿಗ್ಗೆವರೆಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಟ್ರಾಫಿಕ್ ಜಾಮ್‌ನಿಂದಾಗಿ ಕಿ.ಮೀ.ಗೂ ಅಧಿಕ ದೂರದವರೆಗೂ ವಾಹನಗಳು ರಸ್ತೆಯಲ್ಲಿ ಜಮಾವಣೆಗೊಂಡಿದ್ದವು.

Leave a Comment