ಮತ್ತೆ ಬಿಎಸ್‌ಪಿ ಸೇರಲಾರೆ: ಮಹೇಶ್

ಚಾಮರಾಜನಗರ, ನ. ೬- ಮತ್ತೇ ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರು ಸ್ಪಷ್ಟಪಡಿಸಿದ್ದಾರೆ.
ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ನಾನು ಪಕ್ಷದಿಂದ ಹೊರಬಂದಿದ್ದೇನೆ. ಮತ್ತೇ ಆ ಪಕ್ಷಕ್ಕೆ ಸೇರಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸುದ್ಧಿಗಾರರಿಗೆ ತಿಳಿಸಿದ್ದಾರೆ.
ಬಿಎಸ್‌ಪಿಗೆ ಮತ್ತೇ ಸೇರುವಂತೆ ಯಾರು ನನ್ನನ್ನು ಇದುವರೆವಿಗೂ ಸಂಪರ್ಕಿಸಲ್ಲ. ನಾನು ಕೂಡ ಯಾರನ್ನೂ ಸಂಪರ್ಕಿಸುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾನೀಗ ಸ್ವತಂತ್ರ ಶಾಸಕನಾಗಿದ್ದೇನೆ. ಹಾಗಾಗಿ ಮುಂದಿನ 3 ವರೆ ವರ್ಷಗಳ ಕಾಲ ಸ್ವತಂತ್ರವಾಗಿಯೇ ನನ್ನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದೀರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಎನ್. ಮಹೇಶ್ ಅವರು ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಹಾಗಾಗಿ ನನ್ನ ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾದರೆ ನಾನು ಬಿಜೆಪಿ ಸಂಪರ್ಕದಲ್ಲಿ ಇರಬೇಕಾಗುತ್ತದೆ. ಇದಕ್ಕೇನು ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

Leave a Comment