ಮತ್ತೆ ಬರಲಿದ್ದಾರೆ ’ದಂಡುಪಾಳ್ಯ’ಗ್ಯಾಂಗು

ದಂಡುಪಾಳ್ಯ ಗ್ಯಾಂಗು ಎಂದಾಕ್ಷಣ ಥಟ್ಟನೆ ನೆನಪಾಗುವುದು ಭೀಕರ ಕೃತ್ಯಗಳು ಮತ್ತು ಸರಣಿ ಹತ್ಯೆಗಳು. ಇಂತಹ ನೈಜ ಘಟನೆಯನ್ನಾಧಿರಿಸಿ ತೆರೆಗೆ ಬಂದಿದ್ದ ಚಿತ್ರ “ದಂಡುಪಾಳ್ಯ. ಆ ಚಿತ್ರ ಯಶಸ್ವಿಯಾಗುವುದರ ಜೊತೆಗೆ ನಿರ್ಮಾಪಕರ ಜೇಬು ತುಂಬಿಸಿತ್ತು. ಇದೀಗ ದಂಡುಪಾಳ್ಯದ ಸೀಕ್ವೆಲ್ ತೆರೆಗೆ ಬರಲು ಸಜ್ಜಾಗಿದೆ.

“ದಂಡುಪಾಳ್ಯ-೨” ಗೆ ನಾಟಿಕೋಳಿ ಚಿತ್ರದ ನಿರ್ಮಾಪಕ ವೆಂಕಟ್ ಬಂಡವಾಳ ಹಾಕಿದ್ದು ,ಶ್ರೀನಿವಾಸ ರಾಜು ಆಕ್ಷನ್‌ಕಟ್ ಹೇಳಿದ್ದಾರೆ. ಪೂಜಾಗಾಂಧಿ, ರವಿಕಾಳೆ,ಕರಿ ಸುಬ್ಬು, ಮುನಿ,ಮಕರಂದ ದೇಶಪಾಂಡೆ ಸೇರಿದಂತೆ ದಂಡುಪಾಳ್ಯದ ದಂಡು ಇಲ್ಲಿಯೂ ಮುಂದುವರಿದಿದ್ದು ಹಳಬರ ಜೊತೆಗೆ ’ದಂಡುಪಾಳ್ಯ-೨’ಗೆ ಹಿರಿಯ ನಟಿ ಶೃತಿ. ಸಂಜನಾ,ಅವಿನಾಶ್,ಸತ್ಯಜಿತ್,ಆದಿ ಲೋಕೇಶ್ ಹೊಸದಾಗಿ ಗ್ಯಾಂಗು ಸೇರಿಕೊಂಡಿದ್ದಾರೆ.

ಹೊಸಬರ ಪೈಕಿ ಶೃತಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದು ,ಸಂಜನಾ ಗ್ಯಾಂಗ್ ಸದಸ್ಯರಲ್ಲಿ ಒಬ್ಬರು. ಅವಿನಾಶ್ ಜೈಲರ್. ಇನ್ನು ಆದಿ ಲೋಕೇಶ್ ಪಾತ್ರ ಬಗ್ಗೆ  ಚಿತ್ರದಲ್ಲಿಯೇ ನೋಡಬೇಕು ಎನ್ನುವ ಕುತೂಹಲವನ್ನು ಚಿತ್ರತಂಡ ಕಾಪಾಡಿಕೊಂಡಿದೆ. ಚಿತ್ರದಲ್ಲಿ ಪೂಜಾಗಾಂಧಿಗೆ ಸರಿ ಸಮಾನವಾಗಿ ನಟಿ ಸಂಜನಾ ಕಾಣಿಸಿಕೊಂಡಿದ್ದು ಈ ಚಿತ್ರದ ಮೂಲಕ ಅವರಿಗೊಂದು ಮೈಲಿಗಲ್ಲು ಸಿಗಲಿದೆ ಎನ್ನವ ವಿಶ್ವಾಸದಲ್ಲಿದ್ದಾರೆ. ’ದಂಡುಪಾಳ್ಯ-೨’ ಚಿತ್ರ ಬಹುತೇಕ ಚಿತ್ರೀಕರಣ ಮುಗಿದಿದ್ದು ಮುಂದಿನವಾರ ಕುಂಬಳಕಾಯಿ ಹೊಡೆಯಲು ಸಿದ್ಧತೆ ಮಾಡಿಕೊಂಡಿದೆ.ಇನ್ನೇನಿದ್ದರೂ ಚಿತ್ರೀಕರಣದ ನಂತರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಎಲ್ಲಾ ಅಂದುಕೊಂಡಂತೆ ಆದರೆ ಮೇ ತಿಂಗಳಲ್ಲಿ ಚಿತ್ರವನ್ನು ತೆರೆಯ ಮೇಲೆ ತರಲು ನಿರ್ಮಾಪಕ ವೆಂಕಟ್ ಮತ್ತವರ ತಂಡ ಭರದ ಸಿದ್ದತೆ ಮಾಡಿಕೊಳ್ಳುತ್ತಿದೆ. ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ಮಾಪಕ ವೆಂಕಟ್, ದಂಡುಪಾಳ್ಯ ವಿಭಿನ್ನವಾದ ಸಿನಿಮಾ. ಜನಮನ್ನಣೆ ಪಡೆದಿದೆ. ಹೀಗಾಗಿ ದಂಡುಪಾಳ್ಯ-೨ ಬಗ್ಗೆಯೂ ಜನರಿಂದ ಅಪಾರ ನಿರೀಕ್ಷೆ ಇರುವುದರಿಂದ ಪ್ರೇಕ್ಷಕರ ನಿರೀಕ್ಷೆಗಳಿಗೆ ಮೋಸ ಮಾಡದೆ ಉತ್ತಮ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ. ಚಿತ್ರದಲ್ಲಿ ಕಲಾವಿದರ ದಂಡೇ ಇರುವುದರಿಂದ ಚಿತ್ರ ರಂಜನೆಯ ರಸದೌತಣ ನೀಡಲಿದೆ. ಲವ್ ಕಮ್ ಆಕ್ಷನ್ ನಿಂದ ಕೂಡಿದ್ದು ದಂಡುಪಾಳ್ಯಕ್ಕಿಂತ ಈ ಚಿತ್ರ ಇನ್ನಷ್ಟು ಕುತೂಹಲ ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುವ ಭರವಸೆ ಅವರದು.

ಚಿತ್ರವನ್ನು ೪೦ ದಿನಗಳ ಕಾಲ ಬೆಂಗಳೂರಿನ ವಿವಿದೆಡೆ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಸಾಕಷ್ಟು ಕಲಾವಿದರಿರುವುದರಿಂದ ಪ್ರತಿ ದಿನ ಸರಾಸರಿ ೧೫ ಲಕ್ಷಕ್ಕಿಂತ ಹೆಚ್ಚು ಖರ್ಚಾಗಿದೆ. ಈಗಾಗಲೇ ಚಿತ್ರದ ಬಜೆಟ್ ೭ ಕೋಟಿ ರೂಪಾಯಿ ದಾಟಿದೆ. ಕನ್ನಡದ ಜೊತೆಗೆ ತೆಲುಗಿನಲ್ಲಿ ಚಿತ್ರವನ್ನು ಏಕಕಾಲಕ್ಕೆ ತೆರೆಗೆ ತರಲಾಗುವುದು.

ಅಂದಹಾಗೆ ಚಿತ್ರವನ್ನು ತೆಲುಗಿಗೆ ಡಬ್ ಮಾಡಲಾಗುವುದು ಹೀಗಾಗಿ ತೆಲುಗಿನಿಂದಲೂ ಚಿತ್ರಕ್ಕೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದ ಮೇಕಿಂಗ್‌ನಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ಕಥೆಗೆ ಬೇಕಾದುದ್ದನ್ನೆಲ್ಲಾ ಒದಗಿಸಲಾಗಿದೆ .ಚಿತ್ರಕ್ಕೆ  ವೆಂಕಟ್ ಪ್ರಸಾದ್ ಕ್ಯಾಮರ ಚಿತ್ರಕ್ಕಿದೆ. ಹೊಸ ಹೊಸ ವಿಷಯಗಳು ದಂಡುಪಾಳ್ಯ -೨ ನಲ್ಲಿ ಇರಲಿವೆ. ಅವು ಯಾವುವು ಎನ್ನುವುದು ಸದ್ಯಕ್ಕೆ ಕುತೂಹಲವಾಗಿದ್ದರೆ ಒಳ್ಳೆಯದು ಎನ್ನುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.

ದಂಡುಪಾಳ್ಯ-೨ ನೈಜ ಮತ್ತು ಕಾಲ್ಪನಿಕ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಒಳ್ಳೆಯ ಚಿತ್ರವಾಗಲಿದೆ ಇದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುತ್ತಾರೆ ವೆಂಕಟ್.                        -ಚಿಕ್ಕನೆಟಕುಂಟೆ ಜಿ.ರಮೇಶ್

Leave a Comment