ಮತ್ತೆ ಉಸುಕಿನ ಸಂಕಟ

ಬಳ್ಳಾರಿ, ಅ.11: ನಗರದಲ್ಲಿ ಗೃಹನಿರ್ಮಾಣ ಸಣ್ಣ ಪುಟ್ಟ ದುರಸ್ತಿಗೆ ಮತ್ತೆ ಉಸುಕಿನ ಸಂಕಟ ಜನರನ್ನು ಕಾಡುತ್ತಿದೆ. ಇಂದು ಆರಂಭವಾಗುತ್ತೆ, ನಾಳೆ ಆರಂಭವಾಗುತ್ತೆ ಉಸುಕಿನ ಸಾಗಾಟ ಎಂದು ಜಿಲ್ಲಾಡಳಿತ ಹೇಳುತ್ತಲೇ ಇದೆ. ಆದರೆ ಯಾವಾಗ ಎಂಬ ಪ್ರಶ್ನೆಗೆ ನಿಗಧಿತ ದಿನಾಂಕ ಇಲ್ಲವಾಗಿದೆ.

ಜಿಲ್ಲೆಯಲ್ಲಿ ತುಂಗಭದ್ರ, ವೇದಾವತಿ ಎರಡು ನದಿಗಳಿದ್ದರೂ ಅದರಲ್ಲಿ ಸಾಕಷ್ಟು ಪ್ರಮಾಣದ ಮರಳಿದ್ದರೂ ಜನರಿಗೆ ಮಾತ್ರ ಸುಲಭವಾಗಿ ಮತ್ತು ಸರ್ಕಾರ ನಿಗಧಿಪಡಿಸಿದ ಬೆಲೆಗೆ ದೊರೆಯದೆ ಮನೆಗಳ ನಿರ್ಮಾಣ ಕಾರ್ಯಸ್ಥಗಿತಗೊಂಡಿದೆ. ಕೆಲವು ಅರ್ಧಕ್ಕೆ ನಿಂತಿದ್ದರೆ, ಇನ್ನು ಕೆಲವು ಉದ್ಘಾಟನೆಗಾಗಿ ಕೊನೆ ಹಂತಕ್ಕೆ ಬಂದಿರುವ ಮನೆಗಳು ಅಂತಿಮ ಹಂತದ ಕಾಮಗಾರಿಗಳಿಗೆ ಮರಳಿಲ್ಲದೆ, ಮನೆ ಪ್ರವೇಶ ಮುಂದೂಡುವಂತ ಪರಿಸ್ಥಿತಿ ಬಂದೊದಗಿದೆ. ಸಣ್ಣ ಪುಟ್ಟ ದುರಸ್ಥಿ ಕಾರ್ಯಗಳಿಗಂತೂ ಮರಳಿಗಾಗಿ ಪರದಾಡುವಂತಾಗಿದೆ.

ಒಂದು ಕಡೆ ಮರಳಿಲ್ಲದೆ ಮನೆ ನಿರ್ಮಿಸುವ ಮಾಲೀಕರ ಸಂಕಷ್ಟ ಒಂದು ತೆರನಾದರೆ ಕಾಮಗಾರಿ ಇಲ್ಲದೆ ಕಟ್ಟಡ ನಿರ್ಮಾಣ ಕಾರ್ಮಿಕರ ಗೋಳು ಮತ್ತೊಂದು ತೆರನದ್ದಾಗಿದೆ.

ಮರಳಿನ ಈ ಸಮಸ್ಯೆ ಉಂಟಾಗಲು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರೇ ಕಾರಣ ಎನ್ನಲಾಗುತ್ತಿದೆ. ಅವರು ತಮ್ಮ ಬೆಂಬಲಿಗರ ಮೂಲಕ ಈ ದಂಧೆ ನಡೆಸಲೆಂದು ತಾಲೂಕಿನ ಹಗರಿ ನದಿಯಲ್ಲಿ ಮರಳು ಸಂಗ್ರಹಕ್ಕೆ ಬೇಡವೆಂದಿದ್ದಾರಂತೆ ಅದಕ್ಕಾಗಿ ಇಲ್ಲಿ ಸ್ಥಗಿತಗೊಳಿಸಿದೆ.

ಸಮಸ್ಯೆ ಬಗ್ಗೆ ಸಾರ್ವಜನಿಕರ ಒತ್ತಡ ಹೆಚ್ಚಾಗಿದ್ದಲ್ಲದೆ ಈ ತಿಂಗಳ 9ಕ್ಕೆ ಜಿಲ್ಲೆಗೆ ಸಚಿವ ಡಿ.ಕೆ.ಶಿ.ಯವರು ಬಂದರೆ ಅವರನ್ನೇ ಪ್ರಶ್ನಿಸಲಿದೆ ಎಂದು ಕೆಲವರು ಹೇಳಿದ್ದಕ್ಕೆ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತು ಸಿರುಗುಪ್ಪ ಬಳಿ, ಹಗರಿ ನದಿಯಿಂದ ಮರಳನ್ನು ಬಳ್ಳಾರಿಗೆ ಸಾಗಿಸಲು ಅನುಮತಿ ನೀಡಿದೆ ಎಂದು ಪತ್ರಿಕಾ ಹೇಳಿಕೆ ನೀಡಿತು.

ಆದರೆ ಈ ವರೆಗೂ ಅಲ್ಲಿ ಮರಳು ಸಂಗ್ರಹ ಕಾರ್ಯ ಆರಂಭವಾಗಿಲ್ಲ. ಈ ತಿಂಗಳ 17ಕ್ಕೆ ಆರಂಭಿಸಲು ಅಲ್ಲಿ ವೇಬ್ರಿಡ್ಜ್ ನಿರ್ಮಿಸುವಂತೆ ಸೂಚಿಸಿದೆ. ಈ ಬಾರಿ ಇದರ ಹೊಣೆ ಪಿಡಬ್ಲ್ಯೂಡಿ ಗೆ ನೀಡದೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವಹಿಸಿದೆ ಎಂದು ಹೇಳಲಾಗುತ್ತಿದೆ.

ಹತ್ತಿರದ 18-20 ಕಿ.ಮೀ ದೂರದಲ್ಲಿ ದೊರೆಯುವ ಮರಳು ಬಿಟ್ಟು 60-70 ಕಿ.ಮೀ ದೂರದಿಂದ ಮರಳು ತನ್ನಿ ಎಂಬ ಜಿಲ್ಲಾಡಳಿತ ಧೋರಣೆ ಅರ್ಥವಾಗುತ್ತಿಲ್ಲ. ಇದರಿಂದ ಸಾಗಾಣೆ ವೆಚ್ಚ ಹೆಚ್ಚಾಗುತ್ತಿದೆ. ಇನ್ನು ಈಗ ಸೂಚಿಸಿರುವ ಸ್ಥಳದಲ್ಲಿ ಕೇವಲ 1600 ಲಾರಿ ಮರಳಿನ ನಿಕ್ಷೇಪ ಇದೆ. ಅದು 3-4 ದಿನದಲ್ಲಿ ಖಾಲಿಯಾಗುತ್ತದೆ.

ಮರಳಿನ ಅಭಾವ ಇರುವುದರಿಂದ ಮರಳು ಸಾಗಾಣೆದಾರರು ಇದನ್ನೆ ಬಳಸಿಕೊಂಡು ಮರಳಿನ ಬೆಲೆಯನ್ನು ಬಾಯಿಗೆ ಬಂದಷ್ಟು ಹೇಳಲಿದ್ದಾರೆ. ಅದಕ್ಕಾಗಿ ಹತ್ತಿರದಲ್ಲಿನ ಪಿ.ಡಿ.ಹಳ್ಳಿ, ತೊಲಮಾಮಿಡಿ, ಯಾಳ್ಪಿ, ಬಳಿಯಿಂದ ಮರಳು ಸಾಗಿಸಲು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಬೇಕೆಂಬುದು ಜನರ ಒತ್ತಾಯವಾಗಿದೆ.

Leave a Comment