ಮತ್ತಷ್ಟು ಮಳೆ ಎದುರಿಸಲು ಸಿದ್ಧವಾದ ಕೇರಳ

ತಿರುವನಂತಪುರಂ, ಆ. ೧೯- ದೇವರನಾಡು ಕೇರಳದಲ್ಲಿ ಜಲಪ್ರಳಯ ಮುಂದುವರೆದಿದ್ದು, ಮೃತಪಟ್ಟವರ ಸಂಖ್ಯೆ 357ಕ್ಕೇರಿದೆ. ಮಳೆಯ ಹೊಡೆತಕ್ಕೆ ಸಿಕ್ಕಿ ನಲುಗಿರುವ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯ ಮುಂದುವರೆದಿರುವ ಬೆನ್ನಲ್ಲೆ ಇನ್ನಷ್ಟು ಮಳೆ ಸುರಿವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದರಿಂದಾಗಿ ಕೇರಳದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರದಿಂದಾಗಿ 6 ಲಕ್ಷ ಜನರಿಗೆ 3 ಸಾವಿರ ಪರಿಹಾರ ಶಿಬಿರಗಳಲ್ಲಿ ಆಸರೆ ಕಲ್ಪಿಸಲಾಗಿದೆ.

ಸಂಕಷ್ಟಕ್ಕೆ ಸಿಲುಕಿರುವವರನ್ನು ಸುರಕ್ಷಿತವಾಗಿ ಪಾರು ಮಾಡಲು ಭೂ, ವಾಯುಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅವಿರತವಾಗಿ ಶ್ರಮಿಸುತ್ತಿದ್ದು, ಪರಿಹಾರ ಕಾರ್ಯಗಳಿಗಾಗಿ 38 ಹೆಲಿಕಾಪ್ಟರ್‌‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

19kerala2

ಇನ್ನು ಒಂದೆರೆಡು ದಿನಗಳ ಕಾಲ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಸುಳಿವು ನೀಡಿರುವುದು ಆತಂಕ ಪರಿಸ್ಥಿತಿ ಎದುರಾಗಿದೆ. ಹೆಲಿಕಾಪ್ಟರ್‌ನಲ್ಲಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ರವಾನಿಸುವ ಕಾರ್ಯ ಭರದಿಂದ ಸಾಗಿದೆ.

ವೈನಾಡು ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 3 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಪಾರು ಮಾಡಲು ಪರಿಹಾರ ತಂಡ ಯಶಸ್ವಿಯಾಗಿದೆ.  ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿರುವವರಿಗೆ ಶಾಲೆಗಳ ಆಡಿಟೋರಿಯಂಗಳು, ದೇವಾಲಯಗಳು, ಚರ್ಚ್‌ಗಳು ಮತ್ತು ಮಸೀದಿಗಳಲ್ಲಿ ತಾತ್ಕಾಲಿಕ ಆಸರೆ ಕಲ್ಪಿಸಲಾಗಿದೆ.

19kerala6

ಕೆಲವು ಪ್ರದೇಶಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಕ್ಲಿಷ್ಟಕರವಾಗಿದ್ದು, ಜನರು ಅನ್ನ, ಆಹಾರವಿಲ್ಲದೆ ತೀವ್ರ ಅತಂತ್ರ ಸ್ಥಿತಿಯಲ್ಲಿದ್ದಾರೆ. ಮನೆಗಳ ಮೇಲೆ ನೆರವಿಗಾಗಿ ಕಾಯುತ್ತಿರುವ ಜನರನ್ನು ಸುರಕ್ಷಿತವಾಗಿ ಪಾರು ಮಾಡಲು ಪರಿಹಾರ ತಂಡ ನಿರಂತರವಾಗಿ ಶ್ರಮಿಸುತ್ತಿದೆ.

ಕೊಚ್ಚಿ ವಿಮಾನನಿಲ್ದಾಣ ಇನ್ನು ಜಲಾವೃತಗೊಂಡಿದ್ದು, ವಿಮಾನ ಹಾರಾಟಕ್ಕೆ ತೀವ್ರ ತೊಂದರೆಯಾಗಿದೆ. ಪ್ರಯಾಣಿಕರನ್ನು ಸಾಗಿಸಲು ನೌಕಾಪಡೆಯ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

19kerala5

ತ್ರಿಶೂರ್, ಎರ್ಣಾಕುಲಂ ಮತ್ತು ಪಟಾಣಂತಿಟ್ಟ ಜಿಲ್ಲೆಗಳಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಹಾನಿ ಸಂಭವಿಸಿದ್ದು, ವಿಮಾನ ಮತ್ತು ಹೆಲಿಕಾಪ್ಟರ್ ಮೂಲಕ ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.

ಚೇತಕ್ ಮತ್ತು ಎಂ-17 ವಿಮಾನದ ಮೂಲಕ ಪ್ರವಾಹದಲ್ಲಿ ಸಿಲುಕಿದ್ದ 150ಕ್ಕೂ ಹೆಚ್ಚು ಜನರನ್ನು ಸೇನೆ ರಕ್ಷಿಸುವಲ್ಲಿ ಸಫಲವಾಗಿದೆ. ನಿರಾಶ್ರಿತರಿಗಾಗಿ ಆಹಾರದ ಪೊಟ್ಟಣ, ನೀರಿನ ಬಾಟಲ್‌ಗಳನ್ನು ವಿಮಾನದ ಮೂಲಕ ಪೂರೈಸಲಾಗುತ್ತಿದೆ.

19kerala3

ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಐಎನ್‌ಎಸ್ ವೆಂದೂರತಿ ಸಮುದಾಯ ಅಡುಗೆ ಮನೆ ಸ್ಥಾಪಿಸಿದ್ದು, ಇಲ್ಲಿ 7 ಸಾವಿರ ಜನರಿಗೆ ಆಹಾರವನ್ನು ಸಿದ್ಧಪಡಿಸಲಾಗುತ್ತಿದೆ. ಆದರೆ, ಇದಕ್ಕಾಗಿ 17 ಮಂದಿ ಬಾಣಸಿಗರು ಅಡುಗೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ರಾಜ್ಯಸರ್ಕಾರ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಪೂರೈಸುತ್ತಿದೆ. ಒಟ್ಟಾರೆ ಶತಮಾನದಲ್ಲೇ ಕಂಡುಕೇಳರಿಯದ ರೀತಿಯಲ್ಲಿ ವರುಣನ ರೌದ್ರಾವತಾರಕ್ಕೆ ಕೇರಳ ತತ್ತರಿಸಿದೆ.

Leave a Comment