ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ :ವೇಗ ಪಡೆದ ಸೋಲು-ಗೆಲುವಿನ ಲೆಕ್ಕಾಚಾರ

ಎಂ. ರಮೇಶ್ ಚಿ. ಸಾರಂಗಿ
ತುಮಕೂರು, ಸೆ. ೧- ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ 484 ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಪ್ರಭು ಈಗಾಗಲೇ ಬರೆದಿದ್ದು, ಅವರ ಭವಿಷ್ಯ ವಿದ್ಯುತ್ ಮತಯಂತ್ರದಲ್ಲಿ ಅಡಕವಾಗಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಈಗ ಮತ್ತಷ್ಟು ವೇಗ ಪಡೆದುಕೊಂಡಿದೆ.

ತುಮಕೂರು ಮಹಾನಗರ ಪಾಲಿಕೆಯ 251 ಅಭ್ಯರ್ಥಿಗಳು, ಚಿಕ್ಕನಾಯಕನಹಳ್ಳಿ ಪುರಸಭೆಯ 73, ಮಧುಗಿರಿ ಪುರಸಭೆ 68, ಗುಬ್ಬಿ ಪಟ್ಟಣ ಪಂಚಾಯ್ತಿ 68 ಹಾಗೂ ಕೊರಟಗೆರೆ ಪಟ್ಟಣ ಪಂಚಾಯ್ತಿಯ 60 ಅಭ್ಯರ್ಥಿಗಳ ಭವಿಷ್ಯಕ್ಕೆ ಮತದಾರ ಪ್ರಭುಗಳು ಮುದ್ರೆ ಒತ್ತಿದ್ದು, ಮತದಾನ ಮುಗಿಯುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ, ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ನಡುವೆ ಸೋಲು-ಗೆಲುವಿನ ಲೆಕ್ಕಾಚಾರಗಳ ಚರ್ಚೆಗಳು ಬಲು ಜೋರಾಗಿ ನಡೆಯುತ್ತಿವೆ.

ಮತಗಟ್ಟೆವಾರು ಸಮೀಕ್ಷೆಗಳನ್ನು ರಾಜಕೀಯ ಪಕ್ಷಗಳ ಸ್ಥಳೀಯ ಕಾರ್ಯಕರ್ತರುಗಳೇ ಮಾಡುತ್ತಿದ್ದು, ಆ ವಾರ್ಡ್‌ನಲ್ಲಿ ಕಾಂಗ್ರೆಸ್, ಈ ವಾರ್ಡ್‌ನಲ್ಲಿ ಬಿಜೆಪಿ, ಮತ್ತೊಂದರಲ್ಲಿ ಜೆಡಿಎಸ್ ಹಾಗೂ ಬಹುತೇಕ ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುಂದಿದ್ದಾರೆ ಎಂಬ ಲೆಕ್ಕಾಚಾರದ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಇದು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಾದರೂ ಸಹ ಕೇವಲ ನಗರಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶದಲ್ಲಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ಬಾರಿ ಆಯಾ ಪಕ್ಷಗಳ ಅಭ್ಯರ್ಥಿಗಳೊಂದಿಗೆ ವಾರ್ಡ್‌ ಸುತ್ತಿರುವುದರಿಂದ ಈ ಚುನಾವಣೆಯ ಸೋಲು-ಗೆಲುವಿನ ಲೆಕ್ಕಾಚಾರಗಳು ಹಳ್ಳಿಕಟ್ಟೆ ಮೆಟ್ಟಿಲೇರಿವೆ.

ಇನ್ನು ತುಮಕೂರು ನಗರ ಹಾಗೂ ಜಿಲ್ಲೆಯ ಇತರೆ ಪಟ್ಟಣ ಪ್ರದೇಶಗಳಲ್ಲಿ ಯಾವ ಅಂಗಡಿ, ಕಚೇರಿಗಳಿಗೆ ಹೋದರೂ ಸ್ಥಳೀಯ ಸಂಸ್ಥೆ ಚುನಾವಣೆ ಅಭ್ಯರ್ಥಿಗಳ ಸೋಲು-ಗೆಲುವಿನ ಚರ್ಚೆಗಳದ್ದೇ ಕಾರುಬಾರು.

ಅಭ್ಯರ್ಥಿಗಳಲ್ಲಿ ಢವಢವ
ಮತದಾನ ಮುಗಿದ ನಂತರ ರಿಲ್ಯಾಕ್ಸ್‌ ಮೂಡ್‌ನಲ್ಲಿರುವ ಅಭ್ಯರ್ಥಿಗಳಿಗೆ ಸೆ. 3 ಮತ ಎಣಿಕೆ ದಿನ ಹತ್ತಿರವಾಗುತ್ತಿದ್ದಂತೆ ಅವರ ಹೃದಯ ಬಡಿತ ಸಹ ಹೆಚ್ಚಾಗ ತೊಡಗಿದೆ.

ಮತದಾನದ ವರೆಗೂ ನಾನೇ ಗೆಲ್ಲುತ್ತೇನೆ ಎಂಬ ಆತ್ಮ ವಿಶ್ವಾಸದಿಂದ ಅಭ್ಯರ್ಥಿಗಳು, ಮತದಾನ ಮುಗಿದ ನಂತರ ಮತದಾರ ಪ್ರಭು ಯಾರಿಗೆ ಮುದ್ರೆ ಒತ್ತಿದ್ದಾನೋ, ಯಾರನ್ನು ಪಾಲಿಕೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ಕಚೇರಿ ಮೆಟ್ಟಿಲು ಹತ್ತಿಸುತ್ತಾನೋ ಎಂಬ ಬಗ್ಗೆ ಹೃದಯ ಬಡಿತ ಜಾಸ್ತಿಯಾಗಿದೆ.

ಈಗಾಗಲೇ 5 ವರ್ಷಗಳ ಕಾಲ ಸ್ಥಳೀಯ ಸಂಸ್ಥೆಯ ಅಧಿಕಾರ ಅನುಭವಿಸಿರುವವರು ಈ ಬಾರಿ ಮೀಸಲಾತಿ ಬದಲಾವಣೆಯಾಗಿರುವುದರಿಂದ ತಮ್ಮ ಕುಟುಂಬ ಸದಸ್ಯರ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದು, ಮತ್ತೆ ಗೆಲುವು ನಮ್ಮದೇ ಎಂಬ ಅತೀವ ವಿಶ್ವಾಸ ಇದ್ದರೂ ಸಹ ಎಲ್ಲೋ ಒಂದು ಕಡೆ ಮತದಾರ ದೇವರುಗಳು ನಮ್ಮನೆಲ್ಲಿ ತಿರಸ್ಕರಿಸಿ ಬಿಟ್ಟಿದ್ದಾರೋ ಎಂಬ ಭಯ ಸಹ ಮನೆ ಮಾಡಿದೆ.

ಸ್ಥಳೀಯ ಸಂಸ್ಥೆಗಳಿಗೆ ಮತದಾನ ಮುಗಿದು ಮತ ಎಣಿಕೆಯತ್ತ ಎಲ್ಲರ ಚಿತ್ತ ಹರಿದಿರುವ ಬೆನ್ನಲ್ಲೆ ಅಭ್ಯರ್ಥಿಗಳ ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದ ಮಾತುಗಳ ನಡೆದಿದ್ದು, ಇದರ ನಡುವೆಯೇ ಸೋಲು-ಗೆಲುವಿನ ಬೆಟ್ಟಿಂಗ್ ದಂಧೆಯೂ ಬಲು ಜೋರಾಗಿಯೇ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ತುಮಕೂರು ಮಹಾನಗರ ಪಾಲಿಕೆ, ಚಿಕ್ಕನಾಯಕನಹಳ್ಳಿ ಪುರಸಭೆ, ಮಧುಗಿರಿ ಪುರಸಭೆ, ಕೊರಟಗೆರೆ ಪಟ್ಟಣ ಪಂಚಾಯ್ತಿ ಹಾಗೂ ಗುಬ್ಬಿ ಪಟ್ಟಣ ಪಂಚಾಯ್ತಿ ವಾಪ್ತಿಯಲ್ಲಿ ಚುನಾವಣಾ ಪ್ರಕ್ರಿಯೆಗಳು ಮುಗಿದ ಬಳಿಕವೂ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‌ಗೆ ಹೋಗದೆ ಸೋಲು-ಗೆಲುವಿನ ಲೆಚ್ಚಾಕಾರದಲ್ಲಿ ತೊಡಗಿದ್ದಾರೆ. ಯಾವ ಬೂತ್‌ನಲ್ಲಿ ಹೆಚ್ಚು ಮತ ಬಂದಿದೆ, ಎಲ್ಲಿ ಲೆಕ್ಕಾಚಾರ ತಪ್ಪಾಗಿದೆ ಎಂಬ ಅವಲೋಕನ ಕೂಡ ನಡೆಯುತ್ತಿದೆ.

ತುಮಕೂರು ನಗರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಒಳಜಗಳದ ಲಾಭವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪಡೆದುಕೊಂಡಿದ್ದವು. ಹೀಗಾಗಿ ಬಿಜೆಪಿ ಮತ್ತು ಕೆಜೆಪಿ ಸೇರಿ 8 ವಾರ್ಡ್‌ಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಆದರೆ ಈ ಬಾರಿ ನಗರದಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಅಲ್ಲದೆ ಶಾಸಕರೇ ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವುದರಿಂದ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಕಳೆದ 40 ವರ್ಷಗಳಿಂದ ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲದಿದ್ದರೂ ಪಾಲಿಕೆಯಲ್ಲಿ ತನ್ನ ‌ಹಿಡಿತ ಕಾಪಾಡಿಕೊಂಡಿದೆ. ಹೀಗಾಗಿ ಅವರಿಗೂ ಸಹ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ ಇನ್ನು ಕಾಂಗ್ರೆಸ್ ಕೂಡ ಕಳೆದ ಬಾರಿ ಗಣನೀಯ ಸಾಧೆ ಮಾಡಿದ್ದು, ಈ ಬಾರಿ ಉತ್ತಮಪಡಿಸಿಕೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment