ಮತದಾರರ ಪಟ್ಟಿಯಲ್ಲಿ ಎರಡು ಬಾರಿ ನಮೂದಾಗಿರುವ ಮತದಾರರ ಹೆಸರು ತೆಗೆದು ಹಾಕಲು ಕ್ರಮ

ಕಲಬುರಗಿ.ಮಾ.13:ಕಲಬುರಗಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಎರಡೆರಡು ಬಾರಿ ನಮೂದಾಗಿರುವ ಮತದಾರರು ಇದ್ದಾರೆ ಎಂಬ ದೂರುಗಳಿದ್ದವು. ಅವುಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.

ಅವರು ಸೋಮವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರಿಗೆ ಸದಾಚಾರ ಸಂಹಿತೆ ಕುರಿತು ಮಾಹಿತಿ ನೀಡಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಾಯಕ ಮತಗಟ್ಟೆ ಸ್ಥಾಪಿಸಿದ ಕಡೆಯಲ್ಲಿ ರಾಜಕೀಯ ಪಕ್ಷದವರು ಪೊಲಿಂಗ್ ಏಜೆಂಟರನ್ನು ನೇಮಿಸಿ ಹೆಸರು ಸೂಚಿಸಬೇಕೆಂದರು.

ವಿಕಲಚೇತನರು ಸರಾಗವಾಗಿ ಮತದಾನ ಚಲಾಯಿಸಲು ಎಲ್ಲ ಅನುಕೂಲಗಳನ್ನು ಮತಗಟ್ಟೆಗಳಲ್ಲಿ ಕಲ್ಪಿಸಲಾಗಿದೆ. ಬೂತ ಮಟ್ಟದಲ್ಲಿ ವಿಕಲಚೇತನರ ಮಾಹಿತಿ ಸಂಗ್ರಹಿಸಲಾಗಿದೆ.  ಮತಗಟ್ಟೆಯವರೆಗೆ ವಿಕಲಚೇತನರು ಆಗಮಿಸಬೇಕು. ರಾಜಕೀಯ ಪಕ್ಷದವರು ಮುಂಚಿತವಾಗಿಯೇ ತಾವು ಬಳಸುವ ವಾಹನಗಳ ಹಾಗೂ ಸ್ಥಳಗಳ ವಿವರವನ್ನು ಆನ್‍ಲೈನ್ ಮೂಲಕ ಭರ್ತಿ ಮಾಡಿ ಪರವಾನಿಗೆ ಪಡೆಯಬಹುದಾಗಿದೆ. ಇದಕ್ಕಾಗಿ ಸುಗಮ, ಸುವಿಧಾ ಎಂಬ ಪೊರ್ಟಲ್‍ಗಳನ್ನು ಪ್ರಾರಂಭಿಸಲಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ನೀಡಲು ರಾಜಕೀಯ ಪಕ್ಷಗಳ ಮುಖಂಡರ ಸಭೆಯನ್ನು ಮುಂದಿನ ವಾರ ಕರೆಯಲಾಗುವುದು ಎಂದರು.

ರಾಜಕೀಯ ಪಕ್ಷದವರು ಅಥವಾ ಉಮೇದುವಾರರು ಪ್ರಚಾರದ ಸಮಯದಲ್ಲಿ ಧಾರ್ಮಿಕ ಸ್ಥಳಗಳನ್ನು ದುರುಪಯೋಗ  ಪಡಿಸಬಾರದು, ಸರ್ಕಾರಿ ಕಟ್ಟಡಗಳ ಮೇಲೆ ಜಾಹೀರಾತು ಅಂಟಿಸಬಾರದು, ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಹಾಗೆ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು, ಮತದಾರರಿಗೆ ಆಶೆ, ಆಮಿಷ ಒಡ್ಡಬಾರದು ಎಂದು ಜಿಲ್ಲಾ ಮುಖ್ಯ ತರಬೇತುದಾರ ಡಾ. ಶಶಿಶೇಖರ ರೆಡ್ಡಿ ವಿವರಿಸಿದರು.

ಪ್ರತಿ ವಿಧಾನಸಭಾ ಮತಕ್ಷೇತ್ರದಲ್ಲಿ ಉಮೇದುವಾರರು 28 ಲಕ್ಷ ರೂ.ಗಳವರೆಗೆ ಖರ್ಚಿನ ಮಿತಿ ನಿಗದಿಪಡಿಸಲಾಗಿದೆ. ಉಮೇದುವಾರರು ಪ್ರತಿದಿನ ಖರ್ಚು ವೆಚ್ಚಗಳ ವಿವರವನ್ನು ಸಲ್ಲಿಸಬೇಕು. ತಮ್ಮ ಪ್ರಚಾರಕ್ಕಾಗಿ ನಡೆಸುವ ಸಭೆ, ಸಮಾರಂಭಗಳ ಪರವಾನಿಗೆಯನ್ನು ಮುಂಚಿತವಾಗಿ ಪಡೆಯಬೇಕು. ಆಡಳಿತ ಪಕ್ಷದವರು ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳಬಾರದು, ನೋಂದಾಯಿತ ರಾಷ್ಟ್ರೀಯ ಪಕ್ಷದವರು 40 ಜನ ಸ್ಟಾರ್ ಪ್ರಚಾರಕರನ್ನು ಹಾಗೂ ಇನ್ನಿತರ ಪಕ್ಷದವರು 20 ಜನ ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಬಹುದಾಗಿದೆ ಎಂದು ಪಿ.ಪಿ.ಟಿ. ಮೂಲಕ ರಾಜಕೀಯ ಪಕ್ಷದ ಮುಖಂಡರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸೇಡಂ ಸಹಾಯಕ ಆಯುಕ್ತೆ ಬಿ.ಸುಶೀಲಾ,  ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಚುನಾವಣಾ ತಹಶೀಲ್ದಾರ ಸಂಜೀವಕುಮಾರ, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ 1 ಜನವರಿ 2018ಕ್ಕೆ ಅನ್ವಯವಾಗುವ ಅಂತಿಮ ಮತದಾರರ ಪಟ್ಟಿ ವಿತರಣೆ ಮಾಡಲಾಯಿತು

Leave a Comment