ಮಣ್ಣು ಕುಸಿದು ಅಯ್ಯಪ್ಪ ಮಾಲಾಧಾರಿ ಮೃತ್ಯು

ಉಡುಪಿ, ಡಿ.೭- ಬಾವಿಯೊಂದರ ಕೆಲಸದ ಸಂದರ್ಭದಲ್ಲಿ ಮೇಲ್ಭಾಗದ ಮಣ್ಣು ಕುಸಿದು ಅಯ್ಯಪ್ಪ ಮಾಲಾಧಾರಿ ಒಬ್ಬರು ಮೃತಪಟ್ಟಿದ್ದು, ಮೂವರು ಪವಾಡಸದೃಶವಾಗಿ ಪಾರಾದ ಘಟನೆ ಆಲೂರು ಗ್ರಾಪಂ ವ್ಯಾಪ್ತಿಯ ಹಳ್ಳಿ ಎಂಬಲ್ಲಿ ನಿನ್ನೆ ಸಂಭವಿಸಿದೆ. ಆಲೂರು ಗ್ರಾಮದ ಬಸವನ ಜೆಡ್ಡು ನಿವಾಸಿ ಗೋಪಾಲ ಮೊಗವೀರ(೩೨) ಮೃತಪಟ್ಟವರು. ಅಪಾಯದಿಂದ ಪಾರಾಗಿರುವ ಮೂವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸತೀಶ್ ಹೆಗ್ಡೆ ಎಂಬವರ ತೋಟದ ಬೃಹತ್ ಬಾವಿಯಲ್ಲಿ ಹಲವು ದಿನಗಳಿಂದ ೬-೭ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿನ್ನೆ ಬಾವಿ ಕೆಲಸಕ್ಕೆಂದು ಅದರಲ್ಲಿದ್ದ ನೀರನ್ನು ಖಾಲಿ ಮಾಡಿ ಅದನ್ನು ಮೇಲೆ ಹಾಕಲಾಗಿತ್ತು. ನೀರಿನ ತೇವಾಂಶಕ್ಕೆ ಬಾವಿಯ ಒಂದು ಬದಿಯ ಮಣ್ಣು ಕುಸಿದಿದೆ. ಈ ವೇಳೆ ಬಾವಿಯ ಒಳಗೆ ಕೆಲಸ ಮಾಡುತ್ತಿದ್ದ ಗೋಪಾಲ್, ಚಂದ್ರ ಪೂಜಾರಿ(೪೦) ಹಾಗೂ ಶೇಖರ ಪೂಜಾರಿ(೩೮) ಅವರ ಮೇಲೆ ಮಣ್ಣು ಕುಸಿದು ಬಿದ್ದಿದೆ.

ಇದೇ ವೇಳೆ ಬಾವಿಯ ಮೇಲ್ಭಾಗದಲ್ಲಿ ನಿಂತಿದ್ದ ಮಾಲಿಕರಾದ ಸತೀಶ್ ಹೆಗ್ಡೆ ಕೂಡ ಮಣ್ಣು ಕುಸಿದು ಕೆಳಕ್ಕೆ ಬಿದ್ದಿದ್ದಾರೆ. ಬಾಬು ದೇವಾಡಿಗ, ಗುತ್ತಿಗೆದಾರ ನಂಜಪ್ಪ ಪೂಜಾರಿ ಬಾವಿಯ ಮೇಲಿದ್ದರು. ಈ ಪೈಕಿ ಗೋಪಾಲ ಅವರು ಮಣ್ಣಿನಡಿ ಸಂಪೂರ್ಣ ಹುಗಿದುಹೋಗಿದ್ದರಿಂದ ಅವರನ್ನು ರಕ್ಷಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಗಂಗೊಳ್ಳಿ ಎಸ್‌ಐ ವಾಸಪ್ಪ ನಾಯ್ಕಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋಪಾಲ ಅವರು ಡಿ.೫ರಂದು ಅಯ್ಯಪ್ಪ ಮಾಲೆ ಧರಿಸಿದ್ದರು. ಮಾಲೆ ಧರಿಸುವುದು ಅವರ ಹಲವು ವರ್ಷಗಳ ಬಯಕೆಯಾಗಿತ್ತು. ಅವರು ಮಾಲೆ ಧರಿಸುತ್ತಿರುವುದು ಇದೇ ಮೊದಲ ಸಲವಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Leave a Comment