ಮಣಿಪಾಲ್‌ನಲ್ಲಿ ರೋಗಿ ಸಹಾಯ ಕೇಂದ್ರ ಆರಂಭ

ತುಮಕೂರು, ಜೂ. ೧೯- ಇನ್ನು ಮುಂದೆ ಜಿಲ್ಲೆಯ ಜನತೆ ತುಮಕೂರಿನಲ್ಲೂ ವಿಶ್ವ ಮಟ್ಟದ ತಜ್ಞ ವೈದ್ಯರ ಸಲಹೆ ಪಡೆಯುವ ಅವಕಾಶವನ್ನು ಮಣಿಪಾಲ್ ಆಸ್ಪತ್ರೆ ಕಲ್ಪಿಸಿದೆ. ಟೆಲಿಮೆಡಿಸಿನ್ ತಂತ್ರಜ್ಞಾನದ ಅಡಿಯಲ್ಲಿ ರೋಗಿ ಸಹಾಯ ಕೇಂದ್ರ ಆರಂಭಿಸಿದ್ದು, ಇದರ ಮೂಲಕ ರೋಗಿಗಳ ಬಗ್ಗೆ ಇರುವ ಸಂಶಯವನ್ನು ಕುಳಿತಲ್ಲೇ ವೈದ್ಯರ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಶಾಸಕ ಡಾ. ರಫೀಕ್ ಅಹಮದ್ ಹೇಳಿದರು.

ನಗರದ ಸಿದ್ದಗಂಗಾ ಬಡಾವಣೆಯಲ್ಲಿ ಮಣಿಪಾಲ್ ಆಸ್ಪತ್ರೆ ಆರಂಭಿಸಿರುವ ರೋಗಿ ಸಹಾಯ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೋಗಿಗಳು ಪ್ರತಿಯೊಂದಕ್ಕೂ ಬೆಂಗಳೂರಿನಂತಹ ನಗರಗಳಿಗೆ ಅಲೆಯದೆ, ತಜ್ಞ ವೈದ್ಯರ ಸಲಹೆ ಪಡೆಯಲು ಮಣಿಪಾಲ್ ಆಸ್ಪತ್ರೆ ಟೆಲಿಮೆ‌ಡಿಷನ್ ತಂತ್ರಜ್ಞಾನದ ಅಡಿಯಲ್ಲಿ ಆರಂಭಿಸಿರುವ ರೋಗಿ ಸಹಾಯ ಕೇಂದ್ರದಿಂದ ಹೆಚ್ಚಿನ ಸಹಾಯವಾಗಲಿದೆ ಎಂದರು.

ತುಮಕೂರಿನಂತಹ ಅಭಿವೃದ್ಧಿ ಹೊಂದುತ್ತಿರುವ ನಗರಗಳ ಜನರು ತಜ್ಞ ವೈದ್ಯರ ಸಲಹೆ ಬೇಕೆಂದರೆ ಪ್ರತಿಯೊಂದಕ್ಕೂ ಬೆಂಗಳೂರು ಇನ್ನಿತರ ದೊಡ್ಡ ನಗರಗಳ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಪದೇ ಪದೇ ಭೇಟಿ ನೀಡಬೇಕಾಗುತ್ತದೆ. ಮಣಿಪಾಲ್ ಆಸ್ಪತ್ರೆಯ ಟೆಲಿಮೆಡಿಷನ್ ಕೇಂದ್ರದ ಮೂಲಕ ತಮ್ಮ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿರುವವರಿಗೆ ಮಾತ್ರ ದೊಡ್ಡ ಆಸ್ಪತ್ರೆಗಳಿಗೆ ದಾಖಲು ಮಾಡಬಹುದು. ಇದರಿಂದ ಮಧ್ಯಮ ವರ್ಗದ ಜನರೇ ಹೆಚ್ಚಾಗಿರುವ ನಗರ ಮತ್ತು ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮಣಿಪಾಲ್ ಆಸ್ಪತ್ರೆ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮನೋಜ್‌ಕುಮಾರ್ ನಾಯರ್ ಮಾತನಾ‌ಡಿ, ಜಿಲ್ಲೆಯ ಜನರಿಗೂ ವಿಶ್ವಮಟ್ಟದ ತಜ್ಞ ವೈದ್ಯರ ಸಲಹೆ ದೊರೆಯಬೇಕೆಂಬ ಉದ್ದೇಶದಿಂದ ರೋಗಿ ಸಹಾಯ ಕೇಂದ್ರ ತೆರೆಯಲಾಗಿದೆ. ಟೆಲಿಮೆಡಿಷನ್ ವಿಭಾಗದಿಂದ ರೋಗಿಗಳು ತಮ್ಮ ಸಮಸ್ಯೆಯನ್ನು ನೇರವಾಗಿ ವೈದ್ಯರೊಂದಿಗೆ ಸಂವಾದಿಸಿ ಪರಿಹಾರ ಪಡೆಯಬಹುದು ಎಂದರು.

ರೋಗಿ ಸಲಹಾ ಕೇಂದ್ರದ ಉದ್ಘಾಟನೆಯ ಭಾಗವಾಗಿ ಜೂ. 19 ಮತ್ತು 20 ರಂದು ಉಚಿತ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರು ರೋಗಿಗಳನ್ನು ಪರೀಕ್ಷಿಸಿ, ಸಲಹೆ ಸೂಚನೆ ನೀಡಲಿದ್ದಾರೆ. ಅಲ್ಲದೆ ಜೂ. 28 ಮತ್ತು 29 ರಂದು ಮತ್ತೊಂದು ಸುತ್ತಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.

ಮಣಿಪಾಲ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಸ್.ಪಿ. ಸೋಮಶೇಖರ್ ಮಾತನಾಡಿ, ಜಿಲ್ಲೆಯ ಜನತೆಗೆ ವಿಶ್ವ ದರ್ಜೆಯ ಸೇವೆಯನ್ನು ವಿಸ್ತರಿಸಲು ಈ ಕೇಂದ್ರ ಸಹಕಾರಿಯಾಗಿದೆ. ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳಿಗೆ ಇದು ಏಕಗವಾಕ್ಷಿ ಕೇಂದ್ರವಾಗಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕ್ರಮಗಳು, ಅವುಗಳ ದರಪಟ್ಟಿಗಳ ಮಾಹಿತಿ ನೀಡಲಿದ್ದೇವೆ. ಅಲ್ಲದೆ ಟೆಲಿಮೆಡಿಷನ್ ಮತ್ತು ಟೆಲಿ ಕಾನ್ಪರೆನ್ಸ್ ಮೂಲಕ ತಜ್ಞ ವೈದ್ಯರೊಂದಿಗೆ ಸಂವಾದ ನಡೆಸಿ, ಅಗತ್ಯವಿದ್ದರೆ ಮುಖ್ಯ ಆಸ್ಪತ್ರೆಗೆ ಚಿಕಿತ್ಸೆ ಕಳುಹಿಸುವ ವ್ಯವಸ್ಥೆ ಮಾಡಲಿದ್ದು, ನಮ್ಮ ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಣಿಪಾಲ್ ಆಸ್ಪತ್ರೆ ಶಸ್ತ್ರಚಿಕಿತ್ಸಾ ಮುಖ್ಯಸ್ಥ ಡಾ.ಗೌತಮ್‌ದಾಸ್, ಸಚಿನ್ ತಾರಂತ್, ಅರುಣ್ ಚಕ್ರವರ್ತಿ, ಚಂದ್ರಶೇಖರ್, ಡಾ. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Leave a Comment