ಮಡಿವಾಳ ಜನಾಂಗಕ್ಕೆ ಮೀಸಲಾತಿ ಸೌಲಭ್ಯ ನೀಡಲು ಒತ್ತಾಯ

ಗುಬ್ಬಿ, ಅ. ೧೨- ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಮೀಸಲಾತಿ ಸೌಲಭ್ಯಗಳನ್ನು ನಿಯಮಾನುಸಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಮಡಿವಾಳ ಸಮುದಾಯದವರು ಪಟ್ಟಣದ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಸ್ತೇದಾರ್ ರಾಂಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ತಾಲ್ಲೂಕು ಮಡಿವಾಳ ಸಂಘದ ಜಿ.ಎಸ್. ರೇಣುಕಪ್ರಸಾದ್ ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ಸರ್ಕಾರದಿಂದ ಯಾವುದೇ ರೀತಿಯ ಸವಲತ್ತುಗಳು ದೊರೆಯುತ್ತಿಲ್ಲ. ಎಲ್ಲಾ ರೀತಿಯಿಂದಲೂ ವಂಚಿತವಾಗಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ನಿಯಮಾನುಸಾರ ಮಡಿವಾಳ ಸಮುದಾಯಕ್ಕೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸುವತ್ತ ಗಂಭೀರ ಚಿಂತನೆ ನಡೆಸಬೇಕೆಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಜಿ.ಡಿ. ನರಸಿಂಹಮೂರ್ತಿ ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ನಮಗೆ ಮೀಸಲಾತಿ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡುತ್ತಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಕೂಡಲೆ ಶಿಫಾರಸ್ಸು ಮಾಡಬೇಕು. ನಮ್ಮ ಸಮುದಾಯದ ಮಕ್ಕಳು ಸರ್ಕಾರಿ ಉದ್ಯೋಗ ಪಡೆಯುವಲ್ಲಿ ವಿಫಲವಾಗುತ್ತಿದ್ದು, ಬಡತನದಲ್ಲಿಯೇ ಜೀವನ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿದಾಗ ಸರ್ಕಾರದ ಯೋಜನೆಗಳ ಲಾಭ ಪಡೆದು ನಾವು ಅಭಿವೃದ್ದಿಯಾಗಬಹುದು. ಹಾಗಾಗಿ ಇಂದು ರಾಜ್ಯದಲ್ಲೆಡೆ ಪ್ರತಿಭಟನೆ ಮಾಡುತ್ತಿದ್ದು ಇದು ಕೇವಲ ಇಂದಿಗೆ ಮಾತ್ರವಲ್ಲದೆ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತವೆ. ಸರ್ಕಾರ ನಮಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ವೀರಭದ್ರಯ್ಯ, ಕಾರ್ಯಾಧ್ಯಕ್ಷ ಪರಮೇಶ್ವರಪ್ಪ, ಸಂಘಟನಾ ಕಾರ್ಯದರ್ಶಿ ನಾಗರಾಜು, ಪದಾಧಿಕಾರಿಗಳಾದ ಮೋಹನ್ ಕುಮಾರ್, ಕೃಷ್ಣಪ್ಪ, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

Leave a Comment