ಮಡಿಕೇರಿಯತ್ತ ಮಾಜಿ ಸಿಎಂ ಸಿದ್ದು ಪಯಣ

ನೆರೆ ಸಂತ್ರಸ್ತ ಸ್ಥಳಗಳ ಪರಿಶೀಲನೆ; ಸಾಂತ್ವನ
ಮೈಸೂರು, ಆ. 23. ರಣಭೀಕರ ಮಳೆಗೆ ತತ್ತರಿಸಿರುವ ಕೊಡಗು ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರು ಜಿಲ್ಲೆ ಪಿರಿಯಾಪಟ್ಟಣಕ್ಕೆ ನೇರವಾಗಿ ಹೆಲಿಕಾಪ್ಟರ್‍ನಲ್ಲಿ ಬಂದಿಳಿದರು. ಪಿರಿಯಾಪಟ್ಟಣದಲ್ಲಿ ತಾಲ್ಕಾಲಿಕವಾಗಿ ನಿರ್ಮಿಸಿರುವ ಹೆಲಿಪ್ಯಾಡ್‍ನಿಂದ ರಸ್ತೆ ಮೂಲಕ ಕೊಡಗು ಜಿಲ್ಲೆಗೆ ಭೇಟಿ ನಿಡಲಿರುವ ಸಿದ್ದು, ಮೊದಲು ನೆರೆಯಿಂದ ಹಾನಿಗೀಡಾದ ಸ್ಥಳಗಳ ಪರಿಶೀಲನೆ ನಡೆಸಲಿದ್ದಾರೆ. ಆನಂತರ ಮಡಿಕೇರಿಯಲ್ಲಿ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ನೆಲೆ ಕಳೆದುಕೊಂಡಿರುವ ಸಂತ್ರಸ್ತರ ಅಳಲನ್ನು ಆಲಿಸಲಿದ್ದಾರೆ. ಅಲ್ಲದೆ, ಇಂದು ಮಡಿಕೇರಿಯಲ್ಲಿಯೇ ವಾಸ್ತವ್ಯ ಹೂಡಿ, ನೆರೆ ಹಾವಳಿಯಿಂದ ಬದುಕು ಕಳೆದುಕೊಂಡವರಿಗೆ ಯಾವ ರೀತಿ ಪರಿಣಾಮಕಾರಿಯಾಗಿ ನೆರವಾಗಬಹುದು ಎಂದು ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಅವಲೋಕನ ಮಾಡಲಿದ್ದಾರೆ.
ರಸ್ತೆ ದುರವಸ್ಥೆ; ಸಂಚಾರಕ್ಕೆ ಅಡ್ಡಿ
ನೆರೆ ಸಂತ್ರಸ್ತರ ದುಃಖ ದುಮ್ಮಾನ ಆಲಿಸಲು ಮಡಿಕೇರಿಗೆ ತೆರಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ತಂಡಕ್ಕೆ ಪಿರಿಯಾಪಟ್ಟಣದಿಂದ ಕುಶಾಲನಗರ ತಲುಪಲು ಯಾವುದೇ ಅಡ್ಡಿಯಿಲ್ಲ. ಆದರೆ, ಕುಶಾಲನಗರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಡಿಕೇರಿ ತಲುಪಲು ರಸ್ತೆ ಅಷ್ಟು ಸುಗಮವಾಗಿಲ್ಲ ಎಂಬ ಮಾಹಿತಿ ಬಂದಿದೆ. ಪರಿಸ್ಥಿತಿ ಹೀಗಿರುವಾಗ ಮಾಜಿ ಸಿಎಂ ಸಿದ್ದು ತಂಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಡಿಕೇರಿ ತಲುಪುವುದು ಕಷ್ಟವಾಗಿದೆ. ಪರ್ಯಾಯ ಮಾರ್ಗದಲ್ಲಿ ಮಡಿಕೇರಿ ತಲುಪುವುದು ಅನಿವಾರ್ಯವಾಗಲಿದೆ.
ಮಾಜಿ ಸಿಎಂ ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಶಾಸಕರಾದ ಎ. ಮಂಜು, ಕೆ. ವೆಂಕಟೇಶ್ ಸಾಥ್ ನೀಡಿದ್ದಾರೆ.

Leave a Comment