ಮಗು ಅಪಹರಣ ತನಿಖೆ ಚುರುಕು ಆರೋಪಿ ಪತ್ತೆಗೆ ಕಾರ್ಯಾಚರಣೆ

ಕುಂದಾಪುರ, ಜು.೧೨- ತಾಲೂಕಿನ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಎಡಮೊಗೆ ಕುಮ್ಟಿಬೇರು ಎಂಬಲ್ಲಿ ನಿನ್ನೆ ನಸುಕಿನ ಜಾವ ತಾಯಿ ಜೊತೆಗೆ ಮಲಗಿದ್ದ ಎರಡು ವರ್ಷ ಪ್ರಾಯದ ಹೆಣ್ಣುಮಗುವನ್ನು ದುಷ್ಕರ್ಮಿಯೊಬ್ಬ ಅಪಹರಿಸಿದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಕುಮ್ಟಿಬೇರು ಸಂತೋಷ್ ನಾಯ್ಕನ ಮನೆಗೆ ಭೇಟಿ ಕೊಟ್ಟು ತೀವ್ರವಾಗಿ ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಎಸ್‌ಪಿ, ಡಿವೈಎಸ್ಪಿ ದಿನೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕ ಮಂಜಪ್ಪ ನೇತೃತ್ವದಲ್ಲಿ ಸಂತೋಷ್ ನಾಯ್ಕ್ ಅವರು ಮನೆಮಂದಿ, ಸ್ಥಳೀಯರು ಸೇರಿದಂತೆ ಪ್ರತಿಯೊಬ್ಬರನ್ನೂ ವೈಯುಕ್ತಿವಾಗಿ ತನಿಖೆಗೆ ಒಳಪಡಿಸಿದ್ದಾರೆ.
ಶ್ವಾನದಳ ಆಗಮಿಸಿ ತನಿಖೆ ನಡೆಸಿದ್ದರೂ ಆದರೆ ಯಾವುದೇ ಸ್ಪಷ್ಟವಾದ ಮಾಹಿತಿ ಲಭಿಸಿಲ್ಲ. ಕುಮ್ಟಿಬೇರಿಗೆ ನಾಲ್ಕು ಮಾರ್ಗಗಳಿದ್ದು ಎಲ್ಲಾ ಕಡೆ ಇರುವ ಸಿಸಿಟಿವಿ, ಕೆಮರಾಗಳನ್ನೂ ವೀಕ್ಷಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ದಿನೇಶ್ ಕುಮಾರ್ ಹಾಗೂ ಡಿಸಿಐಬಿ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಎಸ್‌ಪಿ ಹೇಳಿದ್ದಾರೆ.

Leave a Comment