ಮಗುವಿಗೆ ತಾಯಿ ಎದೆ ಹಾಲು ಅಮೃತ ಇದ್ದಂತೆ

ತಿಪಟೂರು, ಸೆ. ೨- ತಾಯಿ ಹಾಲು ಅಮೃತಕ್ಕೆ ಸಮಾನವಾಗಿದ್ದು, ಹೆಚ್ಚಿನ ಅವಧಿಯವರೆಗೆ ಎದೆ ಹಾಲನ್ನು ಪಡೆದ ಮಗುವಿನ ಬುದ್ದಿಶಕ್ತಿಯ ಬೆಳವಣಿಗೆ ಆಗುವುದರಿಂದ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡುವ ತಾಯಿಯ ಆಸೆ ಈಡೇರಿದಂತಾಗುತ್ತದೆ. ಆದ್ದರಿಂದ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ತಿಳಿಸಿ ತಪ್ಪದೆ ತಾಯಿ ತನ್ನ ಎದೆಹಾಲನ್ನು ಕುಡಿಸುವುದನ್ನು ಮರೆಯಬಾರದು ಎಂದು ಶಾಸಕ ಬಿ.ಸಿ. ನಾಗೇಶ್ ತಿಳಿಸಿದರು.

ನಗರದ ಆರ್ಯ ಬಾಲಿಕಾ ಶಾಲೆಯಲ್ಲಿ ತಾಲ್ಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ ತಿಪಟೂರು, ಜಿಲ್ಲಾ ಬಾಲಭವನ ಸಂಘ ತುಮಕೂರು, ಕೆ.ವಿ.ಕೆ.ಕೊನೇಹಳ್ಳಿ, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ (ರಿ) ತಿಪಟೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ’ ಹಾಗೂ ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ. ಓಂಕಾರಪ್ಪ, ಈ ಸಮಾಜದಲ್ಲಿ ತಾಯಂದಿರು ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವುದರಿಂದ ಮಕ್ಕಳಿಗೆ ತಾಯಿಯ ಸಂಪೂರ್ಣ ಪ್ರೀತಿ ದೊರೆಯದಂತಾಗಿದೆ. ತಾಯಿಯ ಎದೆಹಾಲು ಹೆಚ್ಚು ಉತ್ಪತ್ತಿಯಾಗುವಂತಹ ತಾಯಂದಿರು ಹಾಲನ್ನು ಚೆಲ್ಲದೆ ವೈದ್ಯರ ಸಲಹೆಯಂತೆ ಬೇರೆ ಮಕ್ಕಳಿಗೆ ಕೊಡುವುದರಿಂದ ಆ ಮಕ್ಕಳು ಸಹ ಆರೋಗ್ಯವಾಂತರಾಗಿರಲು ಸಾಧ್ಯವಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಗೌರಮ್ಮ ಮಾತನಾಡಿ, ಅಮೃತಕ್ಕೆ ಸಮಾನವಾದ ಎದೆಹಾಲನ್ನು ಮಕ್ಕಳಿಗೆ ತಾಯಂದಿರು ತಪ್ಪದೇ ಉಣಿಸಲು ತಿಳಿಸಿ, ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರದ ವಾತಾವರಣವನ್ನು ಮನೆ ಮತ್ತು ಸಮಾಜದಲ್ಲಿ ನೀಡುವುದರಿಂದ ಒಳ್ಳೆಯ ಪ್ರಜೆಯನ್ನು ದೇಶಕ್ಕೆ ತಾಯಂದಿರು ನೀಡಲು ಸಾಧ್ಯವಾಗುತ್ತದೆ ಎಂದರು.

ವೈದ್ಯಾಧಿಕಾರಿ ಡಾ. ವರ್ಷಾ ಮಾತನಾಡಿ, ಮಗುವಿನ ಸರ್ವತೋಮುಖ ಬೆಳವಣಿಗೆಯು ತಾಯಿಯ ಗರ್ಭದಲ್ಲೆ ಪ್ರಾರಂಭಗೊಂಡು ಮಗು ಜನಿಸಿದ ಮುಂದಿನ 3 ವರ್ಷಗಳ ಕಾಲದ ಅವಧಿಯಲ್ಲಿ ಆಗುತ್ತದೆ. ಆದ್ದರಿಂದ ಮಗು ಹುಟ್ಟಿದ ಅರ್ಧ ಗಂಟೆಯೊಳಗಾಗಿ ಮೊದಲ ಹಾಲನ್ನು ತಾಯಿ ನೀಡಬೇಕು. ಇದು ಮೊದಲ 6 ತಿಂಗಳವರೆಗೆ ಆಗಬೇಕು. ನಂತರ 6 ತಿಂಗಳಿಂದ ಕನಿಷ್ಟ 2 ವರ್ಷಗಳವರೆಗೆ ಮೇಲು ಆಹಾರದ ಜತೆ ಎದೆ ಹಾಲನ್ನು ಮುಂದುವರಿಸಬೇಕು. ತಾಯಿ ಮಗುವಿಗೆ ಎದೆಹಾಲನ್ನು ಕುಡಿಸುವಾಗ ಪ್ರೀತಿಯಿಂದ ಸಮಾಧಾನದಿಂದ ಹಾಲು ಉಣಿಸಬೇಕು. ಇದರಿಂದ ಮಗುವಿನ ಸರ್ವತೋಮುಖ ಬೆಳವಣಿಗೆಯ ಜತೆಗೆ ತಾಯಿ, ಮಗುವಿನ ಬಾಂಧವ್ಯ ಹೆಚ್ಚಾಗುತ್ತದೆ. ಮಗುವಿಗೆ ಬೇಗ ಎದೆಹಾಲು ಕುಡಿಸುವುದರಿಂದ ಹಿಡಿದು ಕನಿಷ್ಟ 2 ವರ್ಷಗಳ ವರೆಗೆ ಎದೆಹಾಲು ಉಣಿಸುವುದದರಿಂದ ತಾಯಿಗೆ ಹೆರಿಗೆ ಸಮಯದಲ್ಲಿ ಉಂಟಾಗುವ ರಕ್ತಸ್ರಾವ ಕಡಿಮೆಯಾಗುತ್ತದೆ ಹಾಗೂ ರಕ್ತಹೀನತೆಯನ್ನು ತಡೆಗಟ್ಟಬಹುದು. ಅಲ್ಲದೆ ಗರ್ಭಾಶಯ, ಸ್ತನಕ್ಯಾನ್ಸರ್ ನಂತಹ ಖಾಯಿಲೆಗಳಿಂದ ತಾಯಂದಿರು ಮುಕ್ತವಾಗಬಹುದು. ತಾಯಂದಿರ ಆರೋಗ್ಯವು ಸಹ ವೃದ್ಧಿಯಾಗುತ್ತದೆ. ಈ ಅವಧಿಯಲ್ಲಿ ತಾಯಂದಿರು ಪೌಷ್ಟಿಕ ಆಹಾರಕ್ಕೆ ಒತ್ತು ನೀಡಿ ಸ್ವಚ್ಚತೆ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಡಾ. ಬಿಂದು ಮಾತನಾಡಿ, ಗರ್ಭಿಣಿಯರು ಪೌಷ್ಟಿಕ ಆಹಾರವನ್ನು ಎರಡು ಪಟ್ಟು ತಿನ್ನಬೇಕು. ಇದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ ಹಾಗೂ ಸ್ಥಳೀಯವಾಗಿ ದೊರೆಯುವಂತಹ ಸೊಪ್ಪು, ತರಕಾರಿ, ನೆಲ್ಲಿ, ಸೀಬೆ, ನಿಂಬೆ ಇವುಗಳನ್ನೆಲ್ಲ ಸೇವಿಸುವುದರಿಂದ ವಿಟಮಿನ್ ಸಿ ಹೇರಳವಾಗಿ ದೊರೆಯುತ್ತದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕ ನಟರಾಜ್ ಮಾತನಾಡಿ, ಗರ್ಭಿಣಿಯರು ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಿಕೊಳ್ಳುವುದು ಉತ್ತಮ. ಮಗು ಗಂಡಾಗಲಿ ಅಥವಾ ಹೆಣ್ಣಾಗಲಿ ಉತ್ತಮ ಆರೋಗ್ಯವಂತ ಮಗುವನ್ನು ನೋಡಿಕೊಳ್ಳುವುದು ಗರ್ಭಿಣಿ ತಾಯಂದಿರ ಕರ್ತವ್ಯವಾಗಿದೆ. ಗರ್ಭಿಣಿಯರ ಪತಿಯರು ಸಹ ಕಾರ್ಯಕ್ರಮದಲ್ಲಿ ಹಾಜರಿರುವುದರಿಂದ ಗರ್ಭಿಣಿಯ ಪಾಲನೆ ಪೋಷಣೆಯ ಬಗ್ಗೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಮಮತಾ ಉಮಾಮಹೇಶ್, ನಗರಸಭಾ ಉಪಾಧ್ಯಕ್ಷೆ ಜಹರಾ ಜಬೀನಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಎಸ್.ಕೆ. ಷಡಕ್ಷರಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಂದಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment