ಮಗಳ ಚಿಕಿತ್ಸೆ ನೆರವಿಗಾಗಿ ತಾಯಿಯ ಅಳಲು

ದಾವಣಗೆರೆ, ಆ. 29 – ತಲೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಮೂರ್ಚೆ ರೋಗದಿಂದ ಬಳಲುತ್ತಿರುವ ತಮ್ಮ 12 ವರ್ಷದ ಪುತ್ರಿ ಅಂಜಲಿಯ ಶಸ್ತ್ರ ಚಿಕಿತ್ಸೆ ಹಾಗೂ ನಾಲ್ಕು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕೆಂದು ನಗರದ ಕೊಂಡಜ್ಜಿ ರಸ್ತೆಯ ವಿಜಯನಗರ ಬಡಾವಣೆಯ ನಿವಾಸಿ ಸುಧಾ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ನಾನು ಬಡನತನದಿಂದ ಜೀವನ ಸಾಗಿಸುತ್ತಿದ್ದೇನೆ. ಹಾಗಾಗಿ ಮಗಳ ಚಿಕಿತ್ಸೆ ಹಾಗೂ ಇನ್ನುಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಸಾಲ ಮಾಡಿದ್ದೇನೆ. ಇದರಿಂದ ಮುಂದಿನ ದಿನಗಳಲ್ಲಿ ಮಗಳ ಚಿಕಿತ್ಸೆ ಹಾಗೂ ಮಕ್ಕಳ ಅಭ್ಯಾಸ ಎಲ್ಲಿ ನಿಂತು ಹೋಗುತ್ತದೋ ಎಂಬ ಭಯ ನನ್ನಲ್ಲಿ ಕಾಡುತ್ತಿದೆ ಎಂದು ನೊಂದು ನುಡಿದರು.
ಶಾಲೆಯ ಫೀ ಕಟ್ಟದ ಪರಿಣಾಮ ಮಕ್ಕಳಿಗೆ ತರಗತಿಯಲ್ಲಿ ಕುಳಿತುಕೊಳ್ಳಲು ಅನುಮತಿ ನೀಡುತ್ತಿಲ್ಲ. ಸರಕಾರಿ ಶಾಲೆಗೆ ಸೇರಿಸಬೇಕೆಂದರೂ ಆಗುತ್ತಿಲ್ಲ. ನಾನು ಕೈಮಗ್ಗ ಕೆಲಸಕ್ಕೆ ಹೋಗುತ್ತಿದ್ದು, ಪ್ರತಿನಿತ್ಯದ 120 ರೂ.ಗಳ ಕೂಲಿಯಿಂದ ಜೀವನ ನಿರ್ವಹಣೆ ನಡೆಯುತ್ತಿಲ್ಲ ಎಂದು ಹೇಳಿದರು.
ಮಗಳ ಶಸ್ತ್ರಚಿಕಿತ್ಸೆಗೆ ಸುಮಾರು ಮೂರು ಲಕ್ಷ ರೂ.ಗಳ ತಗುಲುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ಮಗಳ ಶಸ್ತ್ರ ಚಿಕಿತ್ಸೆ ಹಾಗೂ ಇನ್ನುಳಿದ ಮಕ್ಕಳ ಅಭ್ಯಾಸಕ್ಕೆ ದಾನಿಗಳು ಸಹಾಯ ಮಾಡಬೇಕೆಂದು ಮನವಿ ಮಾಡಿದರು. ದಾನಿಗಳು ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ 9900189388 ಇಲ್ಲಿಗೆ ಸಂಪರ್ಕಿಸಲು ಕೋರಿದರು.

Leave a Comment