ಮಕ್ಕಳ ಸೈಕಲ್ ಪೋಷಕರು ಬಳಸಬಾರದು: ರೇಣುಕಸ್ವಾಮಿ

ಚಿಕ್ಕನಾಯಕನಹಳ್ಳಿ, ನ. ೯- ಸರ್ಕಾರ ಮಕ್ಕಳ ವಯಸ್ಸು, ತೂಕದ ಆಧಾರದ ಮೇಲೆ ಸೈಕಲ್ ವಿತರಿಸಿದೆ. ಈ ಸೈಕಲ್‌ನ್ನು ಪೋಷಕರು ಬಳಸಿದರೆ ಸೈಕಲ್ ಗುಜರಿ ಅಂಗಡಿಗೆ ಸೇರುತ್ತದೆ ಎಂದು ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಹೇಳಿದರು.

ಪಟ್ಟಣದ ದೇಶೀಯ ವಿದ್ಯಾಪೀಠ ಶಾಲಾ ಆವರಣದಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರ ಕೊಟ್ಟಿರುವ ಸೈಕಲ್‌ಗಳನ್ನು ಪೋಷಕರು ಜಮೀನಿಗೆ ತೆಗೆದುಕೊಂಡು ಹೋಗಿ ತೆಂಗಿನಮಟ್ಟೆ, ನೀರು ತರಲು ಉಪಯೋಗಿಸಿದರೆ ಸೈಕಲ್ ಬೇಗ ಹಾಳಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಬರುವುದು ತಡವಾಗುತ್ತದೆ. ವಿದ್ಯಾರ್ಥಿಗಳು ಕೊಟ್ಟಿರುವ ಸೈಕಲ್‌ನ್ನು ಜಾಗರೂಕತೆಯಿಂದ ಉಪಯೋಗಿಸಿ ಎಂದು ಸಲಹೆ ನೀಡಿದರು.

ಸರ್ಕಾರ ಕೊಡುತ್ತಿರುವ ಯಾವುದೇ ಸೌಲಭ್ಯವನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಮುಂದೆ ಬರಬೇಕು. ಶಾಲಾ ಮಕ್ಕಳಿಗೆ ಸರ್ಕಾರ ಮಧ್ಯಾಹ್ನದ ಊಟ ಹಾಗೂ ಹಾಲು ನೀಡುತ್ತಿದ್ದು, ಇವುಗಳು ಗುಣಮಟ್ಟ ಇರುವುದರಿಂದ ಹಾಲನ್ನು ತಾತ್ಸಾರ ಮಾಡದೇ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಡಿವಿಪಿ ಶಾಲಾ ಕಾರ್ಯದರ್ಶಿ ಸಿ.ಎಸ್. ನಟರಾಜು ಮಾತನಾಡಿ, ಸರ್ಕಾರ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸೈಕಲ್ ನೀಡುತ್ತಿದ್ದು, ಅದರಂತೆ ನಮ್ಮ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಲಾಗುತ್ತಿದೆ. ಮಕ್ಕಳ ಬಳಿ ಸೈಕಲ್ ಇದ್ದರೂ ಪೋಷಕರು ಮಕ್ಕಳನ್ನು ಮೋಟರ್ ಬೈಕ್‌ನಲ್ಲಿ ಶಾಲೆಗೆ ತಂದು ಬಿಡುವ ಕೆಲಸ ಮಾಡಬಾರದು. ಸರ್ಕಾರ ಕೊಟ್ಟಿರುವ ಸೈಕಲ್‌ನ್ನು ಉಪಯೋಗಕ್ಕೆ ಬರುವಂತೆ ಮಾಡಿ ಎಂದು ಹೇಳಿದರು.

ಪತ್ರಕರ್ತ ಮಂಜುನಾಥ್‌ರಾಜ್ ಅರಸ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಂಡು ಸಮಯಕ್ಕೆ ಸರಿಯಾಗಿ ಶಾಲೆಗೆ ಬರಲಿ ಎಂದೇ ಸರ್ಕಾರಿ ಸೈಕಲ್ ವಿತರಣೆ ಮಾಡುತ್ತಿದೆ. ಇದರಿಂದ ಶಿಕ್ಷಕರು ಮಾಡುವ ಪಾಠ ಬೋಧನೆ ಪೂರ್ಣ ತಿಳಿಯಬಹುದು. ವಿದ್ಯಾರ್ಥಿಗಳು ಸ್ವಚ್ಛತೆಗೆ ಆದ್ಯತೆ ನೀಡಿ, ಪರಿಸರ ಸಂರಕ್ಷಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ವಿ.ಆರ್. ಮೇರುನಾಥ್, ಮುಖ್ಯೋಪಾಧ್ಯಾಯ ನಾಗಲಿಂಗಯ್ಯ, ನರಸಿಂಹಮೂರ್ತಿ, ಸಿ.ಆರ್. ಬಸವರಾಜು, ಅರುಣ್ ಮತ್ತಿತರರು ಉಪಸ್ಥಿತರಿದ್ದರು.

Leave a Comment