ಮಕ್ಕಳ ಸಾಧನೆಗೆ ಶಿಕ್ಷಕರು, ಪೋಷಕರ ಸಹಕಾರ ಅಗತ್ಯ

ಮಧುಗಿರಿ, ಜ. ೧೧- ಮಕ್ಕಳ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯವಿದ್ದು, ಶಿಕ್ಷಕರು ಹಾಗೂ ಪೋಷಕರು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಬಿಇಒ ನರಸಿಂಗಯ್ಯ ತಿಳಿಸಿದರು.

ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಏರ್ಪಡಿಸಿದ್ದ ಎಸ್‌ಎಂ ಆಂಗ್ಲ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸಾಧನೆಗೆ ಶಾಲೆಗಳು ವೇದಿಕೆಯಾಗಬೇಕು. ಇದಕ್ಕೆ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಸ್ವತಃ ಶಿಕ್ಷಕರು ಸದಾ ಅಧ್ಯಯನ ಶೀಲರಾಗಬೇಕು. ಆಧುನಿಕ ಶಿಕ್ಷಣದ ಹಲವಾರು ಆಯಾಮಗಳನ್ನು ಅಭ್ಯಾಸ ಮಾಡುವ ಮೂಲಕ ಮಕ್ಕಳಿಗೆ ಮಾಹಿತಿ ತಂತ್ರಜ್ಞಾನದ ಬಗ್ಗೆ ಉಪಯುಕ್ತ ತರಬೇತಿ ನೀಡಬೇಕು. ಇದರಿಂದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಈ ಶಾಲೆಯು ಪ್ರತಿ ವರ್ಷ ಉತ್ತಮ ಫಲಿತಾಂಶ ದಾಖಲಿಸುತ್ತಿದ್ದು, ಮುಂದೆಯೂ ಇದೇ ರೀತಿ ಸಾಧನೆ ಮಾಡಲಿ ಎಂದರು.

ಖಾಸಗಿ ಶಾಲೆಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಂ.ಎಸ್. ಶಂಕರನಾರಾಯಣ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಭಾಗದ ಮಕ್ಕಳಿಗೂ ಆಧುನಿಕ ಶಿಕ್ಷಣದ ಕನಸಿಗೆ ಆಸರೆಯಾಗಿವೆ. ಪಾಠದ ಜತೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿ, ಮಕ್ಕಳ ಸಾಧನೆಗೆ ಆಡಳಿತ ಮಂಡಲಿ ಬೆನ್ನೆಲುಬಾಗಿ ನಿಂತಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಎಂ.ವಿ. ಮಂಜುನಾಥಾಚಾರ್, ರೋಟರಿ ಅಧ್ಯಕ್ಷ ಹೆಚ್. ಶಿವಕುಮಾರ್, ಶಿಕ್ಷಣ ಸಂಯೋಜಕ ಪ್ರಾಣೇಶ್, ಶಾಲೆಯ ಆಡಳಿತಾಧಿಕಾರಿ ಅಜ್ಗರ್ ನೈನ್, ಆಡಳಿತ ಮಂಡಳಿಯ ನಿಸಾರ್ ಅಹಮದ್, ಎಂ.ಎಸ್. ಆದಿಶೇಷ ಮತ್ತಿತರರು ಉಪಸ್ಥಿತರಿದ್ದರು.

Leave a Comment