ಮಕ್ಕಳ ಶ್ರವಣ ದೋಷ ಪರೀಕ್ಷೆಗೆ ಮನವಿ

\(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಸೆ. ೧೧- ಶ್ರವಣದೋಷ ಭಾರತದಲ್ಲಿ ಎರಡನೇ ಅತಿದೊಡ್ಡ ಅಂಗವೈಕಲ್ಯವಾಗಿದ್ದು ನವಜಾತ ಶಿಶುಗಳ ಶ್ರವಣ ಸಾಮರ್ಥ್ಯ ಸ್ಕ್ರೀನಿಂಗ್ ಕಡ್ಡಾಯಗೊಳಿಸಬೇಕು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ಬ್ರೆಟ್‌ಲೀ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶ್ರವಣ ನಷ್ಟ ಕುರಿತಂತೆ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ಕಳೆದ 4 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದೇನೆ. ಈ ವೇಳೆ ಶ್ರವಣ ಆರೋಗ್ಯ ಕುರಿತಂತೆ ಹೆಚ್ಚು ಜನಜಾಗೃತಿ ಮೂಡಿಸುವುದು ಅಗತ್ಯ. ತೀರ ಶ್ರವಣ ನಷ್ಟಕ್ಕೊಳಗಾಗಿರುವ ಮಕ್ಕಳ ಪೋಷಕರು ಆರಂಭಿಕ ಹಂತದಲ್ಲೇ ಅದನ್ನು ಗುರುತಿಸಿ ಸ್ಕ್ರೀನಿಂಗ್ ಮಾಡಿಸುವ ಮೂಲಕ ಸಹಜ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಬ್ರೆಟ್‌ಲೀ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಶ್ರವಣ ಸಾಮರ್ಥ್ಯ ನವಜಾತ ಶಿಶುಗಳನ್ನು ಸ್ಕ್ರೀನಿಂಗ್‌ಗೆ ಒಳಪಡಿಸುವ ವ್ಯವಸ್ಥೆಯಿಲ್ಲ. ವಿದೇಶಗಳಲ್ಲಿ ಸಾರ್ವತ್ರಿಕ ನವಜಾತ ಶಿಶುಗಳ ಸ್ಕ್ರೀನಿಂಗ್ ಕಡ್ಡಾಯ ಎಂದು ತಿಳಿಸಿದರು.
ವಾಯುಪಡೆಯ ಕಮಾಂಡ್ ಆಸ್ಪತ್ರೆಗೆ ಭೇಟಿ ನೀಡಿ ಎರಡು ನವಜಾತ ಶಿಶುಗಳ ಶ್ರವಣ ಸ್ಕ್ರೀನಿಂಗ್‌ನ್ನು ವೀಕ್ಷಿಸಿ, ತಿಳಿಸಿದ ಅವರು ಕಮಾಂಡ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಶ್ರವಣ ಸ್ಕ್ರೀನಿಂಗ್‌ಗೆ ಇರುವ ಸೌಲಭ್ಯ ಕುರಿತಂತೆ ಮಾಹಿತಿ ನೀಡಿದರು.
ಮಕ್ಕಳ ಈ ಸಮಸ್ಯೆಗಾಗಿ ಕಮಾಂಡ್ ಆಸ್ಪತ್ರೆಯಲ್ಲಿ ನವಶೃತಿ ತರಂಗ ಎನ್ನುವ ಆರೋಗ್ಯ ಯೋಜನೆ ಲಭ್ಯವಿದ್ದು, ಶ್ರವಣ ಸಾಧನ ಅಳವಡಿಕೆ ವ್ಯವಸ್ಥೆಯನ್ನು ಹೊಂದಿದ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವಾ ಆಸ್ಪತ್ರೆಗಳಲ್ಲಿ ಏರ್‌ಫೋಱ್ಸ್ ಕಮಾಂಡ್ ಆಸ್ಪತ್ರೆ ಸಹ ಒಂದಾಗಿದೆ. ಯೋಜನೆ ಆರಂಭವಾದ ನಂತರ 135 ಶ್ರವಣ ಸಾಧನ ಅಳವಡಿಕೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಅನ್ವಯ ವಿಶ್ವದಾದ್ಯಂತ 466 ದಶಲಕ್ಷ ಜನ ಗಂಭೀರ ಪ್ರಮಾಣದ ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಇವುಗಳಲ್ಲಿ 34 ದಶಲಕ್ಷ ಮಕ್ಕಳು ಸೇರಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ 2050ರ ವೇಳೆಗೆ 900 ದಶಲಕ್ಷ ಮಂದಿ ಶ್ರವಣ ದೋಷದಿಂದ ಬಳಲಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜನತೆ ಶ್ರವಣ ದೋಷಕ್ಕೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.

Leave a Comment