ಮಕ್ಕಳ ಆಸಕ್ತಿ ಅರಿತು ಪ್ರೋತ್ಸಾಹಿಸಲು ಸಲಹೆ

ದಾವಣಗೆರೆ, ಸೆ. 9- ಮಕ್ಕಳಿಗೆ ಜೀವನ ಕೌಶಲ್ಯ ಕಲಿಸುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಶಿವಮೊಗ್ಗದ ಮಾನಸಿಕ ರೋಗ ತಜ್ಞೆ ಡಾ.ಪ್ರೀತಿ ಪೈ ಶಾನಬೋಗ್ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ಹಾಗೂ ಕನ್ನಡ ಕುವರ-ಕುವರಿ ಜಿಲ್ಲಾ ಪ್ರಶಸ್ತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಕ್ಕಳು ಅಂಕಪಡೆದರಷ್ಟೇ ಸಾಲದು ಅವರಿಗೆ ಜೀವನದ ಮೌಲ್ಯ ತಿಳಿಸುವುದು ಅಗತ್ಯವಿದೆ. ಪೋಷಕರು, ಶಿಕ್ಷಕರು ಜೀವನ ಕೌಶಲ್ಯ ಕಲಿಸುವ ಪ್ರಯತ್ನ ಮಾಡುವ ಮಕ್ಕಳು ಕೇವಲ ಅಂಕಪಡೆದರಷ್ಟೇ ಸಾಲದು ಅದರ ಜೊತೆ ವ್ಯಕ್ತಿತ್ವ ನಿರ್ಮಾಣ ಮಾಡುವ ಸರ್ವತೋಮುಖ ವಾತಾವರಣ ಕಲ್ಪಿಸಬೇಕು. ಪ್ರತಿ ಮಕ್ಕಳಲ್ಲೂ ಕಲೆ ಅಡಗಿದೆ. ಅದನ್ನು ಅನಾವರಣಗೊಳಿಸಬೇಕು. ಆದ್ದರಿಂದ ಶಿಕ್ಷಣದೊಂದಿಗೆ ಸಂಗೀತ, ಸಾಹಿತ್ಯ ಸೇರಿದಂತೆ ಇತರೆ ಚಟುವಟಿಕೆಗಳನ್ನು ಕಲಿಸುವುದು ಉತ್ತಮ. ಮಕ್ಕಳ ಆಸಕ್ತಿಯ ಕ್ಷೇತ್ರದಲ್ಲಿ ಅವರನ್ನು ಬೆಳೆಯಲು ಬಿಡಬೇಕು. ಸೃಜನಶೀಲ ಕ್ರಿಯಾತ್ಮಕತೆಯನ್ನು ಬಾಲ್ಯದಲ್ಲಿಯೇ ಬೆಳೆಸಿ. ಪೋಷಕರು ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಇದರೊಂದಿಗೆ ಶಿಕ್ಷಕರು ಪ್ರೋತ್ಸಾಹ ಸಹ ಇದೆ. ಈ ಹಿಂದೆ ಲಿಂಗತಾರತಮ್ಯ ಇತ್ತು.ಆದರೆ ಕಾಲ ಬದಲಾದಂತೆ ಸಾಕಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಮಕ್ಕಳು ಓದುವತ್ತ ಆಸಕ್ತಿ ತೋರಿಸಬೇಕು. ಸೋಲು ಜೀವನದಲ್ಲಿ ಸಾಮಾನ್ಯ. ಅದಕ್ಕೆ ಖಿನ್ನತೆಗೊಳಗಬಾರದು. ಸೋಲನ್ನು ದಿಟ್ಟತನದಿಂದ ಎದುರಿಸಬೇಕು. ಅದಕ್ಕೆ ಕೌಶಲ್ಯಬೇಕು. ಅದನ್ನು ರೂಢಿಸಿಕೊಳ್ಳಬೇಕು. ಪೋಷಕರು ಸಹ ಮಕ್ಕಳಿಗೆ ಒತ್ತಡ ಹೇರಬಾರದು. ಅವರನ್ನು ಸ್ವಾತಂತ್ರವಾಗಿರಲು ಬಿಡಬೇಕು ಎಂದರು.
ಈ ಸಂದರ್ಭದಲ್ಲಿ ‌ತಿಮ್ಮಾರೆಡ್ಡಿ, ಕೆ.ಹೆಚ್.ಮಂಜುನಾಥ್, ಕು.ಅಭಿರಾಮಭಾಗವತ್ ಕೆ, ಕು.ಆಯನಾ ಕೆ ರಮಣ್, ಸಾಲಿಗ್ರಾಮ ಗಣೇಶ್ ಶೆಣೈ ಇದ್ದರು.

Leave a Comment