ಮಕ್ಕಳ ಅಪೌಷ್ಠಿಕತೆ ನಿರ್ಮೂಲನೆಗೆ ಕೈಜೋಡಿಸಿ: ರಮೇಶ್ ಬಾಬು

ಬಳ್ಳಾರಿ:ಆ,10 ಮಕ್ಕಳಲ್ಲಿ ಅಪೌಷ್ಠಿಕತೆ ಹೊಗಲಾಡಿಸುವ ನಿಟ್ಟಿನಲ್ಲಿ ವಿಪ್ಸ್(ವಿಕ್ಲಿ ಐರಾನ್ ಆ್ಯಂಡ್ ಪೊಲಿಕ್ ಆ್ಯಸಿಡ್),ಕಬ್ಬಿಣದ ಮಾತ್ರೆ, ಅಲ್ಬಂಡಜೋಲ್ ಮಾತ್ರೆ ನೀಡಿಕೆ ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಕರು ಸೇರಿದಂತೆ ಎಲ್ಲರು ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ರಮೇಶ್ ಬಾಬು ಹೇಳಿದರು.

ಅವರು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಜಿಲ್ಲಾಡಳಿತ,ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಹತ್ತಿರದ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಇಂದು ಏರ್ಪಡಿಸಿದ್ದ ಮಕ್ಕಳಿಗೆ ಮಾತ್ರೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳ ಅಪೌಷ್ಠಿಕತೆಗೆ ನಾನಾ ಕಾರಣಗಳಿದ್ದು, ಅವುಗಳನ್ನು ಹೊಗಲಾಡಿಸಿ ನಮ್ಮ ರಾಷ್ಟ್ರದ ಭಾವಿ ಪ್ರಜೆಗಳನ್ನು ಸದೃಢರನ್ನಾಗಿ ಬೆಳೆಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ವಿವಿಧ ಯೋಜನೆಗಳನ್ನು ಅವರಿಗೆ ಮುಟ್ಟುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಸರಕಾರದಿಂದ ಸಾರ್ವಜನಿಕರಿಗೆ

ಮಕ್ಕಳಲ್ಲಿ ಕಂಡುಬರುವ ಜಂತುಹುಳು ನಿವಾರಣಾ ಮಾಡುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ 1ರಿಂದ 19 ವರ್ಷದೊಳಗಿ ಎಲ್ಲ ಮಕ್ಕಳಿಗೆ ಅಂಗನವಾಡಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಜಂತುಹುಳು ನಿವಾರಣೆಯ ಅಲ್ಪಂಡಜೋಲ್ ಮಾತ್ರೆಗಳನ್ನು ಚೀಪಿಸಿ ಸೇವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಮಾತ್ರೆಗಳನ್ನು ಸೇವಿಸುವುದರ ಮೂಲಕ ಸದೃಢ ಆರೋಗ್ಯ ಬೆಳೆಸಿಕೊಳ್ಳಬೇಕೆಂದರು

ಮಕ್ಕಳಲ್ಲಿ ಕಂಡುಬರುವ ರಕ್ತಹೀನತೆ, ಅಪೌಷ್ಟಿಕತೆ, ಹಸಿವು ಅಗದಿರುವುದು. ನಿಶ್ಯಕ್ತಿ, ಮತ್ತು ನಿರಾಸೆ ಹೊಟ್ಟೆನೋವು ವಾಂತಿ ಬೇದಿ, ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು ಮುಂತಾದವುಗಳು ಜಂತು ಹುಳುವಿನ ಸೊಂಕಿನಿಂದ ಕಂಡುಬರುವಂತದಾಗಿದೆ. ಈ ಜಂತುಹುಳು ನಿವಾರಕ ಅಲ್ಬಂಡಜೋಲ್ ಮಾತ್ರೆಯನ್ನು ಮಕ್ಕಳಿಗೆ ನುಂಗಿಸುವುದರಿಂದ ರಕ್ತಹೀನತೆ ತಡೆಗಟ್ಟುವಿಕೆ, ಪೌಷ್ಟಿಕ ಆಹಾರ ಸೇವನೆ ಹೆಚ್ಚಾಗುವುದು. ರೋಗನಿರೋಧಕ ಶಕ್ತಿ, ಶಾಲೆಯಲ್ಲಿ ಓದಲು ಆಸಕ್ತಿಯ ಹೆಚ್ಚಾಗಲಿದೆ ಎಂದು ಅವರು ವಿವರಿಸಿದರು.

ಜಿಲ್ಲೆಯ 2,393 ಅಂಗನವಾಡಿ ಕೇಂದ್ರಗಳು,ಸರಕಾರಿ ಹಾಗೂ ಅನುದಾನಿತ 2255 ಶಾಲೆಗಳು, 783 ಖಾಸಗಿ ಶಾಲೆಗಳು ಹಾಗೂ 63 ಪದವಿಪೂರ್ವ ಕಾಲೇಜುಗಳಲ್ಲಿ ಏಕಕಾಲಕ್ಕೆ ಮಾತ್ರೆ ನುಂಗಿಸಲಾಗುತ್ತಿದೆ ಎಂದು ವಿವರಿಸಿದ ಡಿಎಚ್‍ಒ ಡಾ.ರಮೇಶಬಾಬು ಅವರು, ಸಾರ್ವಜನಿಕರು ತಮ್ಮ ಮಕ್ಕಳನ್ನು ತಪ್ಪದೆ ಸಂಬಂಧಿಸಿದ ಅಂಗನವಾಡಿ, ಶಾಲೆ ಕಾಲೆಜುಗಳಿಗೆ ಕರೆದು ಕೊಂಡು ಹೋಗಿ ಮಾತ್ರೆ ನುಂಗಿಸಿ ಜಂತು ಹುಳು ನಿವಾರಣೆಯ ಜೋತೆಗೆ ಮಕ್ಕಳನ್ನು ಜಂತು ಹುಳು ಸೋಂಕಿನಿಂದ ಆಗುವ ತೊಂದರೆಯನ್ನು ತಡೆಗಟ್ಟಲು ಮುಂದಾಗಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗೇಶ ಬಿಲ್ವಾ ಮಾತನಾಡಿದರು.

ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಎಂ.ಎಚ್.ರವೀಂದ್ರನಾಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಂತುಹುಳು ನಿವಾರಣಾ ದಿನದ ಧೈಯೋದ್ದೇಶಗಳನ್ನು ವಿವರಿಸಿದರು.

ಅಲ್ಬಂಡಜೋಲ್ ಮಾತ್ರೆಯನ್ನು ಸೇವಿಸುವುದರಿಂದ ದೈನಂದಿನ ಕಾರ್ಯಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುವುದರ ಜೊತೆಗೆ ಒಬ್ಬರಿಂದ ಒಬ್ಬರಿಗೆ ಸೊಂಕು ಹರಡುವುದನ್ನು ತಡೆಗಟ್ಟುವ ಮೂಲಕ ಜಂತುಹುಳು ಸೋಂಕನ್ನು ತಡೆಗಟ್ಟಬಹುದು. ಅಲ್ಲದೆ ಕೈಗಳನ್ನು ಸ್ವಚ್ಚವಾಗಿಡುವುದರಿಂದ, ಶುದ್ದ ನೀರು ಕುಡಿಯುವುದರಿಂದ, ಹಣ್ಣು ಮತ್ತು ತರಕಾರಿಗಳನ್ನು ಶುದ್ದ ನೀರಿನಿಂದ ತೊಳೆಯುವುದಂದ, ಆಹಾರ ಪದಾರ್ಥ ಮುಚ್ಚಿಡುವುದರಿಂದ, ಪಾದರಕ್ಷೆಗಳನ್ನು ಬಳಸುವುದರಿಂದ, ಶೌಚಾಲಯ ಬಳಕೆಯಿಂದ, ಸುತ್ತಲಿನ ಪರಿಸರ ಸ್ವಚ್ಚವಾಗಿಡುವುದರಿಂಧ ಆಹಾರ ಸೇವನೆ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬುನಿನಿಂದ ತೊಳೆಯುವುದರಿಂದ ಪರೊಕ್ಷವಾಗಿ ಜಂತು ಹುಳು ಸೊಂಕು ತಡೆಯಬಹುದು ಎಂದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸತ್ಯನಾರಾಯಣ, ಉಪಪ್ರಾಚಾರ್ಯ ಬಿ.ಎಂ.ವಿಜಯಲಕ್ಷ್ಮಿ, ತಾಲೂಕು ಆರೋಗ್ಯ ಅಧಿಕಾರಿ‌ ಡಾ.ಅಬ್ದುಲ್ಲಾ, ಪಶುವೈದ್ಯಾಧಿಕಾರಿ ಡಾ.ಯಾಶ್ಮೀನ್,ಸಂಯೋಜಕ ಗಂಗಾಧರ್, ಹಿರಿಯ ಆರೋಗ್ಯ ಸಹಾಯಕ ಶಿವುಕುಮಾರ ಮತ್ತಿತರರು ಇದ್ದರು. ಟಿ.ಕೃಷ್ಣನಾಯಕ್ ನಿರೂಪಿಸಿದರು. ಶಾಂತಮ್ಮ ವಂದಿಸಿದರು. ಶಾಲೆಯ ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.

Leave a Comment