ಮಕ್ಕಳಿಗೆ ಸಿರಿಧಾನ್ಯದ ಬಿಸಿಯೂಟ

ಬೆಂಗಳೂರು, ಜ.೧೨: ಮಕ್ಕಳಿಗೆ ಪೌಷ್ಟಿಕತೆಯ ಭದ್ರತೆ ನೀಡುವ ದೃಷ್ಟಿಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪೂರೈಸುವ ಬಿಸಿ ಊಟದಲ್ಲಿ ಸಿರಿಧಾನ್ಯದಿಂದ ತಯಾರಿಸಿದ ಆಹಾರ ಪೂರೈಕೆಗೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಇಂದಿಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿದರು.
ಕೃಷಿ ಇಲಾಖೆಯು ಅಕ್ಷಯ ಪಾತ್ರ ಸಂಸ್ಥೆಯ ಸಹಯೋಗದಲ್ಲಿ ಇಂಟರ್ ನ್ಯಾಷನಲ್ ಕ್ರಾಪ್ಸ್ ರೀಸರ್ಚ್ ಇನ್ಸ್ಟಿಟ್ಯೂಟ್ ಫಾರ್ ದಿ ಸೆಮಿ ಆರಿಡ್ ಟ್ರಾಫಿಕ್ಸ್ ( ಇಕ್ರಿಸ್ಯಾಟ್) ಸಂಸ್ಥೆಯ ಮಾರ್ಗದರ್ಶನದಲ್ಲಿ ಬೆಂಗಳೂರಿನ ಹತ್ತು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ೧೬೨೨ ಮಕ್ಕಳಿಗೆ ಸಿರಿಧಾನ್ಯದಿಂದ ತಯಾರಿಸಿದ ಆಹಾರ ತಲುಪಿಸುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ನಗರದ ಕುಮಾರಸ್ವಾಮಿ ಲೇಔಟ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ದೇಶ ಆಹಾರ ಭದ್ರತೆಯನ್ನು ಸಾಧಿಸಿದೆ. ಪ್ರಸ್ತುತ ಪೌಷ್ಟಿಕಾಂಶ ಭದ್ರತೆಯತ್ತ ಗಮನ ಕೊಡಬೇಕಾದ ದಿನಮಾನಗಳು ಬಂದಿವೆ ಎಂದ ಅವರು, ರಾಜ್ಯದ ಮಕ್ಕಳಿಗೆ ಪೌಷ್ಟಿಕಾಂಶ ಭರಿತ ಆಹಾರ ಕೊಡಲು ಸಿರಿಧಾನ್ಯ ಬಳಸಿ ತಯಾರಿಸಿದ ಬಿಸಿ ಆಹಾರವನ್ನು ಬಿಸಿಯೂಟದಲ್ಲಿ ಪೂರೈಸಲಾಗುತ್ತಿದೆ ಎಂದರು.
ಸಿರಿಧಾನ್ಯಗಳು ಸ್ವಾಭಾವಿಕವಾಗಿಯೇ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಪ್ರಾಯೋಗಿಕವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಿರಿಧಾನ್ಯ ಬಳಸಿ ತಯಾರಿಸಿದ ಆಹಾರ ಪೂರೈಕೆಯ ಈ ಪ್ರಾಯೋಗಿಕ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗುವಸಾಧ್ಯತೆಯಿದೆ ಎಂದು ಹೇಳಿದರು.
ಅಕ್ಷಯ ಪಾತ್ರೆ ಸಂಸ್ಥೆಯ ಉಪಾಧ್ಯಕ್ಷ ಚಂಚಲಪತಿ ದಾಸ ಮಾತನಾಡಿ, ಸಿರಿಧಾನ್ಯ ಆಧಾರಿತ ಉಪ್ಪಿಟ್ಟು, ಬಿಸಿಬೇಳೆ ಬಾತ್, ಸಿಹಿ ಮತ್ತು ಖಾರ ಪೊಂಗಲ್ ಗಳನ್ನು ವಾರದಲ್ಲಿ ಎರಡು ದಿನ ಬಿಸಿಯೂಟದಲ್ಲಿ ಪೂರೈಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ ಮತ್ತು ಮಂಗಳೂರಿನಲ್ಲಿ ಸರ್ಕಾರ ಮತ್ತು ಅನುದಾನಿತ ಶಾಲೆಗಳ ಐದು ಲಕ್ಷ ಮಕ್ಕಳಿಗೆ ಬಿಸಿಯೂಟ ಪೂರೈಸಲಾಗುತ್ತಿದೆ. ಇದರಲ್ಲಿ ಸಿರಿಧಾನ್ಯ ಆಧರಿಸಿದ ಆಹಾರವನ್ನು ಸೇರಿಸಲಾಗುತ್ತಿದೆ ಎಂದು ಅವರು, ಮೂರು ತಿಂಗಳ ಪ್ರಾಯೋಗಿಕ ಫಲಿತಾಂಶವನ್ನು ಆಧರಿಸಿ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಇಕ್ರಿಸ್ಯಾಟ್ ನ ಮುಖ್ಯಸ್ಥೆ ಜೋಯಾ ಕೆ ಪಟಾಕಾ, ಮಹಾನಗರ ಪಾಲಿಕೆ ಸದಸ್ಯೆ ಶೋಭಾ ಆಂಜನಪ್ಪ ಮುಂತಾದವರು ಉಪಸ್ಥಿತರಿದ್ದರು.

Leave a Comment