ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಂಸ್ಕೃತಿ ಕಲಿಸಿ

ರಾಯಚೂರು.ಜ.14- ಪೋಷಕರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಂಸ್ಕೃತಿ ಕಲಿಸಲು ಮುಂದಾಗಬೇಕೆಂದು ಭಗೀರಥ ಪೀಠದ ಶ್ರೀ ಪುರಷೋತ್ತಮ ನಂದಪೂರಿ ಸ್ವಾಮೀಜಿ ಅವರು ಪೋಷಕರಿಗೆ ಕರೆ ನೀಡಿದರು.
ಅವರಿಂದು ದೇವದುರ್ಗ ತಾಲೂಕಿನ ತಿಂಥಣಿ ಬ್ರಿ‌ಡ್ಜ್‌ನಲ್ಲಿ ಆಯೋಜಿಸಿರುವ ಹಾಲುಮತ ಸಂಸ್ಕೃತಿ ವೈಭವ 2020 ಮೂರನೇ ದಿನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವುದುಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಲು ಮುಂದಾಗಬೇಕು. ಶಿಕ್ಷಣದ ಜೊತೆಗೆ ಸಂಸ್ಕೃತಿಯನ್ನು ಕಲಿಸಿದಾಗ ಸಮಾಜದ ಏಳಿಗೆ ಜೊತೆಗೆ ಮಕ್ಕಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆಂದರು.
ಹಾಲುಮತ ಸಮಾಜವು ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಬಲಿಷ್ಟತೆ ಹೊಂದಿದ ಸಮಾಜವಾಗಿದೆ. ಸಮಾಜದ ಅಭಿವೃದ್ಧಿ ಜೊತೆಗೆ ಇನ್ನಿತರ ಸಮಾಜಗಳ ಬಗ್ಗೆ ಚಿಂತನೆ ಮಾಡುವ ಸಮಾಜವಾಗಿದೆ. ಹಾಲುಮತ ಸಮಾಜದಿಂದ ಘಟಾನುಘಟಿ ನಾಯಕ ಬೆಳೆದಿದ್ದಾರೆ. ಐಎಎಸ್ ಮತ್ತು ಕೆಎಎಸ್ ಹುದ್ದೆಗಳನ್ನು ಪಡೆಯುವ ಮೂಲಕ ಉನ್ನತ ಸ್ಥಾನದಲ್ಲಿ ಸಮಾಜದ ಅನೇಕರು ಇದ್ದಾರೆಂದು ತಿಳಿಸಿದರು.
ಸಮಾಜದ ಮನಸ್ಸು ಹಾಲಿನಂತೆ, ನಂಬಿದವರಿಗೆ ಮೋಸ ಮಾಡುವ ಸಮಾಜವಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು 5 ವರ್ಷ ಆಡಳಿತ ನಡೆಸುವ ಮೂಲಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಮುಖ್ಯಮಂತ್ರಿಯಾಗಿದ್ದಾರೆಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಶ್ರೀ ಈಶ್ವರ ನಂದಂಪೂರಿ ಸ್ವಾಮೀಜಿ, ಮಾಜಿ ಸಚಿವ ತಂಗಡಗಿ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಶಾಸಕ ಡಿ.ಎಸ್.ಹುಲಗೇರಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Comment