ಮಕ್ಕಳಿಗೆ ಕ್ಷಯರೋಗ ಕಂಡುಬಂದಲ್ಲಿ ಶೀಘ್ರ ಚಿಕಿತ್ಸೆ ನೀಡಿ

ರಾಯಚೂರು.ಜು.17- ಹದಿಹರೆಯದ ಮಕ್ಕಳಲ್ಲಿ ಕ್ಷಯರೋಗ ಕಂಡು ಬಂದಲ್ಲಿ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೊಳಪಿಡಿಸುವ ಮೂಲಕ ಶೀಘ್ರ ಗುಣಮುಖರನ್ನಾಗಿಸುವ ಕಡೆ ಪಾಲಕರು ಗಮನ ಹರಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಕೆ. ನಸೀರ್ ಹೇಳಿದರು.
ಸ್ಥಳೀಯ ಹರಿಜನವಾಡದ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ, ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯನ್ನು ಕ್ಷಯರೋಗ ಮುಕ್ತವನ್ನಾಗಿಸಲು ಪ್ರತಿಯೊಬ್ಬರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಹೇಳಿದರು.

ಈ ಆಂದೋಲನವು ಇಂದಿನಿಂದ ದಿ.31 ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಿ, ಕ್ಷಯರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಹೇಮಲತಾ ಪಿ.ಬೂದೆಪ್ಪ ಅವರು, ಆರೋಗ್ಯ ಇಲಾಖೆಯು ಆಯೋಜಿಸಿರುವ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಸಮಾರಂಭ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕ್ಷಯರೋಗ ನಿವಾರಣಾಧಿಕಾರಿ ಡಾ.ಸುರೇಂದ್ರಬಾಬು ಪ್ರಸ್ತಾವಿಕ ಮಾತನಾಡಿದರು. ಡಾ.ಎಸ್.ಕೆ.ನಾಗರಾಜ, ಡಾ.ಕೆ.ಗಣೇಶ, ಡಾ.ಶಿವುಕುಮಾರ, ಗೋವಿಂದರಾಜ, ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment